ಡಿ.ದೇವರಾಜ ಅರಸು, ಅಶೋಕ ರಸ್ತೆಗಳಲ್ಲಿ  ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಜಾರಿಗೆ ನಿರ್ಧಾರ
ಮೈಸೂರು

ಡಿ.ದೇವರಾಜ ಅರಸು, ಅಶೋಕ ರಸ್ತೆಗಳಲ್ಲಿ ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಜಾರಿಗೆ ನಿರ್ಧಾರ

December 4, 2018

ಮೈಸೂರು: ಮೈಸೂರಿನ ಪ್ರಮುಖ ವಾಣಿಜ್ಯ ವಹಿವಾಟು ಮಾರ್ಗಗಳಾದ ಡಿ.ದೇವರಾಜ ಅರಸು ರಸ್ತೆ ಹಾಗೂ ಅಶೋಕ ರಸ್ತೆಯಲ್ಲಿ ತಮ್ಮ ವಾಹನ ನಿಲುಗಡೆ ಶುಲ್ಕ ಪಾವತಿಸಲು ಸಿದ್ಧರಾಗಿ ಮಾಲೀಕರೇ.

ಏಕೆಂದರೆ ಈ ಎರಡೂ ರಸ್ತೆಗಳಲ್ಲಿ ಕಾರು ಹಾಗೂ ದ್ವಿಚಕ್ರವಾಹನಗಳಿಗೆ ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.

ಬೆಳಿಗ್ಗೆಯಿಂದ ಸಂಜೆವರೆಗೆ ಕಾರುಗಳನ್ನು ನಿಲ್ಲಿಸುವುದು, ಅಡ್ಡಾದಿಡ್ಡಿ ನಿಲುಗಡೆ ಹಾಗೂ ದ್ವಿಚಕ್ರವಾಹನಗಳ ಕಳ್ಳ ತನಗಳಂತಹ ಪ್ರಕರಣಗಳಿಂದ ಸಾರ್ವಜನಿಕರಿಗುಂಟಾ ಗುತ್ತಿರುವ ತೊಂದರೆ ತಪ್ಪಿಸಿ, ವ್ಯವಸ್ಥಿತ ಹಾಗೂ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದು, ಸಂಪ ನ್ಮೂಲ ಕ್ರೋಢೀಕರಿಸುವ ಉದ್ದೇಶದಿಂದ ಈ ಕ್ರಮಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾ ಗಿದ್ದಾರೆ. ಡಿ.ದೇವರಾಜ ಅರಸು ರಸ್ತೆಯ ಸಂತೇಪೇಟೆ ಜಂಕ್ಷನ್‍ನಿಂದ ಜೆಎಲ್‍ಬಿರಸ್ತೆ ಜಂಕ್ಷನ್‍ವರೆಗೆ ಹಾಗೂ ದೊಡ್ಡ ಗಡಿಯಾರದಿಂದ ನೆಹರು ಸರ್ಕಲ್‍ವರೆಗೆ (ಮೇನ್ ಪೋಸ್ಟ್ ಆಫೀಸ್ ಸರ್ಕಲ್) ಎರಡೂ ಬದಿಯಲ್ಲಿ ನಾಲ್ಕು ಚಕ್ರ (ಕಾರು) ಮತ್ತು ದ್ವಿಚಕ್ರ (ಸ್ಕೂಟರ್, ಬೈಕ್) ವಾಹನ ಪೇ-ಅಂಡ್-ಪಾರ್ಕ್ ವ್ಯವಸ್ಥೆ ಜಾರಿಗೆ ಬರಲಿದೆ.

ಪೇ ಅಂಡ್ ಪಾರ್ಕ್ ವ್ಯವಸ್ಥೆ ನಿರ್ವಹಿಸಲು ಮೈಸೂರು ಮಹಾನಗರ ಪಾಲಿಕೆಯು ಈವರೆಗೆ ಖಾಸಗಿಯವರಿಂದ 5 ಬಾರಿ ಟೆಂಡರ್ ಕರೆದಿತ್ತಾದರೂ, ಯಾರೊಬ್ಬರೂ ಅರ್ಜಿ ಸಲ್ಲಿಸಲಿಲ್ಲ.

2016ರ ಅಕ್ಟೋಬರ್ 7, 2017ರ ಫೆಬ್ರವರಿ 2, ಏಪ್ರಿಲ್ 14, ಮೇ 11 ಹಾಗೂ ಜೂನ್ 23ರಂದು ಟೆಂಡರ್ ಪ್ರಕಟಣೆ ನೀಡಲಾಗಿತ್ತಾದರೂ, ಯಾರೂ ಟೆಂಡರ್ ಸಲ್ಲಿಸಲಿಲ್ಲವಾದ್ದರಿಂದ ಕಡೇ ಪ್ರಯತ್ನವಾಗಿ ಇನ್ನೆರಡು ದಿನದೊಳಗಾಗಿ ಮತ್ತೆ ಟೆಂಡರ್ ಆಹ್ವಾನಿ ಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಸೂಪ ರಿಂಟೆಂಡಿಂಗ್ ಇಂಜಿನಿಯರ್(ಎಲೆಕ್ಟ್ರಿಕಲ್) ಜಿ.ಆರ್. ಸುರೇಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಒಂದು ವೇಳೆ ಈ ಬಾರಿಯೂ ಖಾಸಗಿಯವರು ಟೆಂಡರ್ ಸಲ್ಲಿಸದಿದ್ದಲ್ಲಿ, ವಿಚಾರವನ್ನು ಕೌನ್ಸಿಲ್ ಸಭೆಗೆ ಮಂಡಿಸಿ ಅನುಮೋದನೆ ಪಡೆದು ಪಾಲಿಕೆಯಿಂದಲೇ ಆ ಎರಡೂ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಳವಡಿಸಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಿ ಕಂಪ್ಯೂಟರ್ ಟಿಕೆಟ್ ವಿತರಿಸುವ ಮೂಲಕ ಪಾಲಿಕೆಯೇ ಈ ವ್ಯವಸ್ಥೆಯನ್ನು ನಿರ್ವಹಿಸಬೇಕಾಗುತ್ತದೆ ಎಂದು ಸುರೇಶ ತಿಳಿಸಿದರು. ಕಾರುಗಳಿಗೆ ಮೊದಲ 1 ಗಂಟೆ
ಅವಧಿಗೆ 10 ರೂ, ನಂತರದ ಪ್ರತೀ ಗಂಟೆಗೆ 5 ರೂ ಮತ್ತು ದ್ವಿಚಕ್ರ ವಾಹನಗಳಿಗೆ ಮೊದಲ 1 ಗಂಟೆಗೆ 5 ರೂ. ಹಾಗೂ ನಂತರದ ಪ್ರತೀ ಗಂಟೆಗೆ 3 ರೂ.ನಂತೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಈ ಹಿಂದೆಯೇ ನಿರ್ಧರಿಸಲಾಗಿದೆ ಎಂದೂ ನುಡಿದರು.

ಡಿ.ದೇವರಾಜ ಅರಸು ರಸ್ತೆಯಲ್ಲಿ 220 ಕಾರುಗಳು, 900 ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡಲು ಅವಕಾಶವಿದೆ. ಅದೇ ರೀತಿ ಅಶೋಕ ರಸ್ತೆಯಲ್ಲಿ 150 ಕಾರುಗಳು, 400 ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.

ನೀರು ತುಂಬಿದೆ: ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪುರಭವನ ಆವರಣದಲ್ಲಿ ನಿರ್ಮಿಸಿರುವ ಬಹು ಮಹಡಿ ಪಾರ್ಕಿಂಗ್ ಕಟ್ಟಡದ ಸೆಲ್ಲರ್‍ನಲ್ಲಿ ನೀರು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಿದಲ್ಲಿ ಅಲ್ಲಿಯೂ ಒಂದು ಮಹಡಿಯಲ್ಲಿ 300 ಕಾರು ಮತ್ತು 800 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಒಟ್ಟು ಎರಡು ಮಹಡಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಅಲ್ಲಿಯೂ ಪೇ- ಅಂಡ್ ಪಾರ್ಕ್ ಸೌಲಭ್ಯ ಅನುಷ್ಠಾನಗೊಳಿಸಲು ಪಾಲಿಕೆಯು 15 ದಿನದೊಳಗಾಗಿ ಟೆಂಡರ್ ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಮೂಲಗಳು ತಿಳಿಸಿವೆ.

Translate »