ಮೈಸೂರು: ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮೈಸೂರಿನ ಹೃದಯ ಭಾಗಗಳೂ ಸೇರಿದಂತೆ ಹಲ ವೆಡೆ ಜನ ಸಂಚಾರ ವಿರಳವಾಗಿತ್ತು.
ಮೈಸೂರಿನ ಕೆಆರ್ ವೃತ್ತ, ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿತ್ಯ ಇರುತ್ತಿದ್ದಷ್ಟು ಜನ ಸಂಚಾರವೇ ಇರಲಿಲ್ಲ. ಬಹುತೇಕರು ಮತದಾನ ಪ್ರಕ್ರಿಯೆಯಲ್ಲಿ ತಲ್ಲೀನರಾದರೆ, ರಜೆಯೊಂದಿಗೆ ಬಿಸಿಲಿನ ಬೇಗೆ ಯಿಂದಲೂ ಅನೇಕರು ಹೊರ ಬಾರದಿರಬಹುದು. ಸಾಮಾನ್ಯವಾಗಿ ನಿತ್ಯ ಇರುತ್ತಿದ್ದ ಜನ ಸಂದಣಿ ಇರದಿದ್ದ ದೃಶ್ಯ ಇಂದು ಬೆಳಿಗ್ಗೆ ನಗರದ ಹೃದಯಭಾಗ ಮಾತ್ರ ವಲ್ಲದೆ, ನಗರ ವಿವಿಧ ಭಾಗಗಳಲ್ಲೂ ಗೋಚರಿಸಿತು.
ದಿನನಿತ್ಯ ಜನ ಜಂಗುಳಿ ಇರುತ್ತಿದ್ದ ಡಿ.ದೇವರಾಜ ಅರಸು ರಸ್ತೆಯಲ್ಲಿ ಬೆಳಿಗ್ಗೆ 10 ಗಂಟೆವರೆಗೂ ಅಂತಹ ಜನ ದಟ್ಟಣೆ ಕಾಣಿಸಲಿಲ್ಲ. ಅಲ್ಲದೆ, ಈ ರಸ್ತೆ ಯಲ್ಲಿ ಬಹುತೇಕ ಅಂಗಡಿ-ಮುಂಗಟ್ಟು ಗಳು ಬೆಳಿಗ್ಗೆ 10 ಗಂಟೆಯವರೆಗೂ ಬಾಗಿಲು ಮುಚ್ಚಿದ್ದರೆ, ಆ ಬಳಿಕ ಕೆಲವು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಕುವೆಂಪುನಗರ ನ್ಯೂ ಕಾಂತರಾಜ ಅರಸ್ ರಸ್ತೆ ಹಾಗೂ ಇದರ ಸುತ್ತಮುತ್ತಲ ರಸ್ತೆ ಗಳಲ್ಲೂ ಇಂದು ಬೆಳಿಗ್ಗೆ ನಿತ್ಯ ಇರುತ್ತಿದ್ದಂತೆ ಜನದಟ್ಟಣೆ ಇರಲಿಲ್ಲ. ಅದೇ ರೀತಿ ಸರ ಸ್ವತಿಪುರಂ, ಕುವೆಂಪುನಗರ ಹಾಗೂ ರಾಮಕೃಷ್ಣನಗರದಲ್ಲಿ ಹಾದು ಹೋಗಿರುವ ವಿಶ್ವ ಮಾನವ ಜೋಡಿ ರಸ್ತೆಯಲ್ಲೂ ಬೆಳಿಗ್ಗೆ ಜನ ಸಂಚಾರ ವಿರಳವಾಗಿತ್ತು.