ಮೈಸೂರು ಜಿಲ್ಲಾಸ್ಪತ್ರೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಪ್ಲಂಬರ್ ಸಾವು
ಮೈಸೂರು

ಮೈಸೂರು ಜಿಲ್ಲಾಸ್ಪತ್ರೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಪ್ಲಂಬರ್ ಸಾವು

February 8, 2019

ಮೈಸೂರು: ಮೈಸೂರಿನ ಮೇಟಗಳ್ಳಿಯ ಇಡಿ ಆಸ್ಪತ್ರೆ ಆವರಣದ ನೂತನ ಜಿಲ್ಲಾಸ್ಪತ್ರೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಪ್ಲಂಬರ್ ಇಂದು ಬೆಂಗಳೂರಿನ ನಿಮ್ಹಾನ್ಸ್‍ನಲ್ಲಿ ಸಾವನ್ನ ಪ್ಪಿದ್ದಾರೆ.

ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ಮೋಹನ ಕುಮಾರ್(30) ಸಾವನ್ನಪ್ಪಿದವರು. ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಆತ, ಇಡಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸು ತ್ತಿರುವ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದಾಗ ಫೆಬ್ರವರಿ 4ರಂದು ಸಂಜೆ 4 ಗಂಟೆ ವೇಳೆಗೆ ಆಯತಪ್ಪಿ 2ನೇ ಮಹಡಿಯಿಂದ ಬಿದ್ದಿದ್ದರು. ತಲೆಗೆ ತೀವ್ರ ಗಾಯಗಳಾಗಿದ್ದ ಮೋಹನ್ ಕುಮಾರ್‍ನನ್ನು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಬೆಂಗಳೂರಿನ ನಿಮ್ಹಾನ್ಸ್‍ಗೆ ದಾಖಲು ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಮೋಹನ ಕುಮಾರ್ ಚಿಕಿತ್ಸೆಗೆ ಸ್ಪಂದಿಸದೇ ಇಂದು ಸಂಜೆ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಮೇಟ ಗಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಮೋಹನ ಕುಮಾರ್ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆಂದು ಪತ್ನಿ ಶಿಲ್ಪ ಅವರು ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಇಂದು ಸಂಜೆ ಸಂಬಂಧಿಕರು, ಪೊಲೀಸರು ಬೆಂಗಳೂರಿಗೆ ತೆರಳಿದ್ದು, ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ಮೈಸೂರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.

Translate »