ಮೈಸೂರು: ಮುರಿದಿರುವ, ಬಣ್ಣ ಮಾಸಲಾಗಿದ್ದ ಪೊಲೀಸ್ ಬ್ಯಾರಿ ಕೇಡ್‍ಗಳಿಗೆ ಹೊಸ ರೂಪ ಕೊಡುವ ಕಾರ್ಯ ಇಂದಿನಿಂದ ಮೈಸೂರಲ್ಲಿ ಆರಂಭ ವಾಗಿದೆ. ಮೈಸೂರು ನಗರ ನೂತನ ಪೊಲೀಸ್ ಕಮಿಷ್ನರ್ ಆಗಿ ಅಧಿಕಾರ ವಹಿಸಿ ಕೊಂಡ ಕೆ.ಟಿ.ಬಾಲಕೃಷ್ಣ ಅವರು, ಮೈಸೂರು ನಗರದಾದ್ಯಂತ ಅಲ್ಲಲ್ಲಿ ಇರಿಸಲಾಗಿದ್ದ ಬ್ಯಾರಿಕೇಡ್‍ಗಳಲ್ಲಿ ಕೆಲವು ಮುರಿದಿದ್ದವು. ಮತ್ತೆ ಕೆಲವು ಬಹಳ ಕೆಟ್ಟದಾಗಿ ಕಾಣಿಸುತ್ತಿ ದ್ದರಿಂದ ಪ್ರವಾಸಿಗರಲ್ಲಿ ಮೈಸೂರಿನ ಬಗ್ಗೆ ಅಂದಗೆಟ್ಟ ಭಾವನೆ ಬರುತ್ತದೆ ಎಂಬ ಕಾರಣಕ್ಕೆ ಅವುಗಳಿಗೆ ಬಣ್ಣ ಬಳಿಯಬೇಕೆಂದು ನಿರ್ದೇಶನ ನೀಡಿದರು. ಮುರಿದಿರುವ ಬ್ಯಾರಿಕೇಡ್ ಗಳನ್ನು ತೆಗೆದು ಹಾಕಿ, ಉಳಿದವುಗಳಿಗೆ ಬಣ್ಣ ಬಳಿದು ಅವುಗಳ ಅಂದ ಹೆಚ್ಚಿಸುವಂತೆ ಪೊಲೀಸ್ ಕಮಿಷ್ನರ್ ಸೂಚನೆಯಂತೆ ಎಲ್ಲಾ ಸಂಚಾರ ಠಾಣೆ ಹಾಗೂ ಸಿವಿಲ್ ಪೊಲೀಸ್ ಸ್ಟೇಷನ್‍ಗಳ ಸಿಬ್ಬಂದಿ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಇಂದು ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಪಿ.ಎ.ಸೂರಜ್ ಅವರ ನೇತೃತ್ವದಲ್ಲಿ ಠಾಣಾ ಆವರಣದಲ್ಲಿರುವ 200ಕ್ಕೂ ಹೆಚ್ಚು ಕಬ್ಬಿಣದ ಬ್ಯಾರಿಕೇಡ್‍ಗಳಿಗೆ ಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ರಸ್ತೆ ಮಧ್ಯೆ ವಿಭಜಕಗಳಾಗಿ ಅಳವಡಿಸಿರುವ ಹಾಗೂ ಹಲವು ಜಂಕ್ಷನ್‍ಗಳಲ್ಲಿನ ಬ್ಯಾರಿಕೇಡ್‍ಗಳಿಗೆ ಬಣ್ಣ ಬಳಿಯುವ ಕೆಲಸದಲ್ಲೂ ಪೊಲೀಸರು ನಿರತರಾಗಿದ್ದಾರೆ.