ಪೊಲೀಸ್ ವಾಹನ, ಆಂಬುಲೆನ್ಸ್ ತೀವ್ರ ತಪಾಸಣೆ
ಮೈಸೂರು

ಪೊಲೀಸ್ ವಾಹನ, ಆಂಬುಲೆನ್ಸ್ ತೀವ್ರ ತಪಾಸಣೆ

April 14, 2019

ಮೈಸೂರು: ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ಭಾರತ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಚುನಾವಣಾ ದಿನ ಸಮೀಪಿಸು ತ್ತಿರುವಂತೆಯೇ ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ ಪುತ್ರ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿ ಬೆಂಗಳೂರು, ಮೈಸೂರು, ನಾಗಮಂಗಲ ಕಡೆಯಿಂದ ಸಂಪರ್ಕ ಕಲ್ಪಿಸುವ ಎಲ್ಲಾ ಹೆದ್ದಾರಿಗಳ ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಕೆಎಸ್‍ಆರ್‍ಟಿಸಿ ಬಸ್ಸುಗಳು, ವಿವಿಧ ಸರ್ಕಾರಿ ಅಧಿಕಾರಿಗಳ ವಾಹನಗಳು, ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‍ಗಳು ಹಾಗೂ ಪೊಲೀಸ್ ವಾಹನಗಳನ್ನೂ ಚೆಕ್‍ಪೋಸ್ಟ್ ಸಿಬ್ಬಂದಿ ತಡೆದು ನಿಲ್ಲಿಸಿ, ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಪೊಲೀಸ್ ವಾಹನಗಳು, ಆಂಬುಲೆನ್ಸ್‍ಗಳಲ್ಲಿ ಚುನಾವಣೆಗೆ ಹಣ ಸಾಗಿಸುತ್ತಿದ್ದ ಪ್ರಕರಣ ಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಲ್ಲ ಸರ್ಕಾರಿ ವಾಹನ, ಕೆಎಸ್‍ಆರ್‍ಟಿಸಿ ಬಸ್ಸುಗಳು, ಪೊಲೀಸ್ ಅಧಿಕಾರಿಗಳ ವಾಹನಗಳು ಹಾಗೂ ಆಂಬುಲೆನ್ಸ್ ಗಳನ್ನು ತಪಾಸಣೆ ನಡೆಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮೈಸೂರು ಹೆದ್ದಾರಿ, ಹುಣಸೂರು ರಸ್ತೆ, ಕೆಆರ್‍ಎಸ್ ರಸ್ತೆ, ಹೆಚ್.ಡಿ. ಕೋಟೆ ರಸ್ತೆ, ಬೋಗಾದಿ ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ, ಮಹದೇವಪುರ ರಸ್ತೆಗಳ ಸ್ಟ್ಯಾಟಿಕ್ ಚೆಕ್‍ಪೋಸ್ಟ್ ಗಳಲ್ಲಿ ವೀಡಿಯೋ ಸರ್ವೆಲೆನ್ಸ್ ಟೀಂನೊಂದಿಗೆ ಸಿಬ್ಬಂದಿ ಸರ್ಕಾರಿ ವಾಹನಗಳನ್ನು ತಪಾಸಣೆ ಮಾಡಲಾಗು ತ್ತಿದೆ. ಮೈಸೂರಿಗೆ ಬರುವ ಹಾಗೂ ಹೋಗುವ ರಸ್ತೆಗಳಲ್ಲಿ ಕಳೆದ 4 ದಿನಗಳಿಂದ ಕೆಎಸ್‍ಆರ್ ಟಿಸಿ ವಾಹನಗಳನ್ನೂ ನಿಲ್ಲಿಸಿ ಪ್ರಯಾಣಿಕರ ಸೀಟುಗಳಲ್ಲಿ, ಲಗೇಜ್ ಬಾಕ್ಸ್, ಟಾಪ್‍ನಲ್ಲೂ ತಪಾಸಣೆ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿರುವ ಕಾರಣ ಕೆಲ ಪ್ರಯಾ ಣಿಕರು ತಾಳ್ಮೆ ಕಳೆದುಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ತಿರುಗಿ ಬಿದ್ದು ವಾಗ್ದಾಳಿ ನಡೆಸುತ್ತಿರುವುದೂ ಸಹ ಅಲ್ಲಲ್ಲಿ ಕಂಡು ಬಂದಿದೆ. ಹೆದ್ದಾರಿಗಳಲ್ಲಿ ಅಳವಡಿಸಿ ರುವ ಸಿಸಿ ಕ್ಯಾಮರಾಗಳಲ್ಲಿ ಫುಟೇಜ್‍ಗಳನ್ನು ಸ್ಥಳದಲ್ಲಿರುವ ಚೆಕ್‍ಪೋಸ್ಟ್‍ಗಳ ಸಿಬ್ಬಂದಿ ವೀಕ್ಷಿಸಿ ಸಂಶಯ ಬಂದ ವಾಹನಗಳನ್ನು ತಡೆದು ತೀವ್ರ ತಪಾಸಣೆ ನಡೆಸಲಾಗುತ್ತಿದೆ.

Translate »