ಮಹನೀಯರ ಪೀಠಗಳ ವಾರ್ಷಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ಮಾತ್ರ ಅದಕ್ಕೆ ಸಾರ್ಥಕತೆ
ಮೈಸೂರು

ಮಹನೀಯರ ಪೀಠಗಳ ವಾರ್ಷಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ಮಾತ್ರ ಅದಕ್ಕೆ ಸಾರ್ಥಕತೆ

February 6, 2019

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿತವಾಗಿರುವ ಮಹನೀಯರ ಪೀಠಗಳು ಹಾಗೂ ದತ್ತಿ ಉಪನ್ಯಾಸಗಳಡಿಯ ಕಾರ್ಯ ಚಟುವಟಿಕೆ ಗಳನ್ನು ಸಕಾಲದಲ್ಲಿ ವ್ಯವಸ್ಥಿತ ಮತ್ತು ಪರಿಣಾಮಕಾರಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ವತಿಯಿಂದ `ಸಾರ್ವಜನಿಕ ಆಡಳಿತದಲ್ಲಿ ನೀತಿ ಮತ್ತು ದೃಢತೆ’ ಕುರಿತಂತೆ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಶಿಕ್ಷಣ ಸಚಿವ ಎಂ.ಮಲ್ಲಿಕಾರ್ಜುನಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ವಿವಿಯಲ್ಲಿ ಸ್ಥಾಪನೆಯಾಗಿರುವ ವಿವಿಧ ಮಹನೀಯರ ಪೀಠಗಳಲ್ಲಿ ವಾರ್ಷಿಕ ಕಾರ್ಯ ಚಟುವಟಿಕೆಗಳು ಪರಿಣಾಮ ಕಾರಿಯಾಗಿ ಜರುಗಿದರೆ ಮಾತ್ರ ಅದರ ಉದ್ದೇಶ ಈಡೇರಲು ಸಾಧ್ಯ. ಅದೇ ರೀತಿ ಹಲವು ಮಹನೀಯರ ಹೆಸರಿನಲ್ಲಿ ಸ್ಥಾಪನೆ ಯಾಗಿರುವ ದತ್ತಿ ಉಪನ್ಯಾಸಗಳು ಸಕಾಲ ದಲ್ಲಿ ಆಯೋಜನೆಗೊಳ್ಳಲು ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಪ್ರಯೋಜನಕಾರಿ ಆಗಲಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಸುವ್ಯ ವಸ್ಥಿತ ಮಾದರಿಯಲ್ಲಿ ಈ ಕಾರ್ಯ ಚಟು ವಟಿಕೆಗಳು ನಡೆಯುವಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಜ್ಜನಿಕೆ ರಾಜಕಾರಣಿ: ಪ್ರಸಕ್ತ ರಾಜ ಕೀಯ ಸನ್ನಿವೇಶಗಳಿಗೆ ಹಾಗೂ ಯುವ ರಾಜಕಾರಣಿಗಳಿಗೆ ಅಗತ್ಯವಾಗಿ ಬೇಕಿರುವ ವಿಷಯವನ್ನೇ ಉಪನ್ಯಾಸಕ್ಕೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ. 1957 ರಿಂದ 1977ರವರೆಗೆ ಸತತವಾಗಿ ನಾಲ್ಕು ಬಾರಿ ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನ ಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಯಾಗಿದ್ದ ಎಂ.ಮಲ್ಲಿಕಾರ್ಜುನಸ್ವಾಮಿ ಸಜ್ಜನಿಕೆ ರಾಜಕಾರಣಿ. ಅವರ ಕೊಡುಗೆ ಬಗ್ಗೆ ಇಂದಿನ ಯುವ ಜನತೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಇಂದಿನ ಉಪನ್ಯಾಸ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಎಂ.ಮಲ್ಲಿಕಾರ್ಜುನಸ್ವಾಮಿ ಅವರ ದತ್ತಿ ಉಪನ್ಯಾಸವನ್ನು ಸ್ಥಾಪಿಸಿದ ಅವರ ಕುಟುಂಬ ಸದಸ್ಯರು ಉಪನ್ಯಾಸದ ಉದ್ದೇಶ ಈಡೇರಬೇಕೆನ್ನುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ಹೊಂದಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಅವರ ಪತ್ನಿ ಜಯಮ್ಮ ಮಲ್ಲಿಕಾ ರ್ಜುನಸ್ವಾಮಿ ಹಾಗೂ ಪುತ್ರ ಡಾ.ಶೇಖರ್ ಖುದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ ಎಂದು ಪ್ರೊ.ಜಿ. ಹೇಮಂತ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ.ಆರ್. ರಾಜಣ್ಣ ಮಾತನಾಡಿ, ಎಂ.ಮಲ್ಲಿಕಾರ್ಜುನ ಸ್ವಾಮಿ ತಮ್ಮ ಜೀವಿತಾವಧಿಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. 1953ರಲ್ಲಿ ಅರ್ಥ ಶಾಸ್ತ್ರ ವಿಷಯದಲ್ಲಿ ಬಿಎ ಹಾನರ್ಸ್ ಪದವಿ ಪಡೆದಿದ್ದರು. ಮಳವಳ್ಳಿಯಲ್ಲಿ ಶಾಂತಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡಿ, ಅದರ ಪ್ರಾಂಶುಪಾಲರಾಗಿ ಸೇವೆ ನೀಡುವ ಮೂಲಕ ಅಧ್ಯಾಪನ ವೃತ್ತಿಯನ್ನು ಪ್ರೀತಿಯಿಂದ ಕಂಡಿದ್ದರು ಎಂದು ಸ್ಮರಿಸಿದರು.

ಮೈಸೂರು ವಿವಿಯ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅವರು ರಾಜಕಾರಣ ಪ್ರವೇ ಶಿಸಿ ರಾಜ್ಯ ಹಾಗೂ ಸಂಪುಟ ದರ್ಜೆ ಸಚಿವರಾಗಿ ಅಮೂಲ್ಯ ಸೇವೆ ನೀಡಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಹೆಸರಿನ ದತ್ತಿ ಉಪನ್ಯಾಸ ಸಹಕಾರಿಯಾಗಲಿದೆ ಎಂದರು.

ಬಳಿಕ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಉಪನ್ಯಾಸ ನೀಡಿದರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಹದೇವ್, ಎಂ.ಮಲ್ಲಿಕಾರ್ಜುನ ಸ್ವಾಮಿ ಅವರ ಪತ್ನಿ ಜಯಮ್ಮ ಮಲ್ಲಿಕಾ ರ್ಜುನಸ್ವಾಮಿ, ಪುತ್ರ ಡಾ.ಶೇಖರ್ ಮತ್ತಿತರರು ಹಾಜರಿದ್ದರು.

Translate »