ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ
ಮೈಸೂರು

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ

August 1, 2019

ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್‍ಗೆ ಹೆಚ್ಚುವರಿ ಹೊಣೆ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸಿ.ಟಿ. ಶಿಲ್ಪಾನಾಗ್ ಅವ ರಿಗೆ 365 ದಿನ ಗಳ ಶಿಶು ಪಾಲನಾ ರಜೆ ಮಂಜೂರು ಮಾಡಲಾಗಿದೆ.

ಅಖಿಲ ಭಾರತ ಸೇವಾ (ರಜಾ) ನಿಯಮಗಳು, 1955ರ ನಿಯಮ 18 (ಡಿ) ಅನ್ವಯ 2019ರ ಜುಲೈ 26ರಿಂದ 2020ರ ಜುಲೈ 24ರ ವರೆಗೆ ಒಟ್ಟು 365 ದಿನಗಳ ಶಿಶು ಪಾಲನಾ ರಜೆ ಮಂಜೂರು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಶಕುಂತಲಾ ಚೌಹಲಾ ಇಂದು ಆದೇಶ ಹೊರಡಿಸಿದ್ದಾರೆ. ತಮ್ಮ ಮಗುವಿನ ಪಾಲನೆ ಹಾಗೂ ಆರೋಗ್ಯದ ದೃಷ್ಟಿಯಿಂದ ತಮಗೆ ಸುದೀರ್ಘ 2 ವರ್ಷಗಳ ಕಾಲ ರಜೆ ಮಂಜೂರು ಮಾಡುವಂತೆ ಕೋರಿ ಶಿಲ್ಪಾನಾಗ್ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅವರ ಕೋರಿಕೆಯನ್ನು ಪರಿಗಣಿಸಿದ ಸರ್ಕಾರ ಒಂದು ವರ್ಷ ಶಿಶುಪಾಲನಾ ರಜೆ ನೀಡಿದೆ.

ಅವರ ರಜೆ ಅವಧಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಹೊಣೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಮೀಷನರ್ ಪಿ.ಎಸ್. ಕಾಂತರಾಜ್ ಅವರಿಗೆ ಹೆಚ್ಚುವರಿಯಾಗಿ ವಹಿಸಿ, ಸರ್ಕಾರ ಆದೇಶಿಸಿದೆ. ನಾಳೆ (ಆ. 1) ಕಾಂತರಾಜು ಅವರು ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಹೊಣೆ ವಹಿಸಿಕೊಳ್ಳುವರು.

ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಸ್‍ಐಆರ್‍ಡಿ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಲ್ಪಾನಾಗ್ ಅವರು 2019ರ ಫೆಬ್ರವರಿ 17ರಂದು ನಗರಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

Translate »