ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರಕ್ಕೆ ಮನವಿ
ಮೈಸೂರು

ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರಕ್ಕೆ ಮನವಿ

August 1, 2019

ಮೈಸೂರು,ಜು.31(ಪಿಎಂ)-ಚುಟುಕು ಸಾಹಿತ್ಯ ಪರಿಣಾಮಕಾರಿ ಸಾಹಿತ್ಯ ಪ್ರಾಕಾರ ವಾಗಿದ್ದು, ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಹೇಳಿದರು.

ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದಲ್ಲಿರುವ ಶಿವರಾತ್ರೀಶ್ವರ ಮಹಿಳಾ ಸಮಾಜದಲ್ಲಿ ಚುಟುಕು ಸಾಹಿತ್ಯ ಪರಿಷತ್‍ನ ಮೈಸೂರು ಜಿಲ್ಲಾ ಘಟಕ, ಕೌಸ್ತುಭ ಪ್ರಕಾಶನದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ರತ್ನ ಹಾಲಪ್ಪಗೌಡ ಸಂಪಾದನೆಯ `ಚುಟುಕು ಚಂದನ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗದ್ಯಕ್ಕಿಂತ 4 ಸಾಲುಗಳ ಚುಟುಕು ಸಾಹಿತ್ಯ ಓದಲೂ ಸುಲಭ, ಪರಿಣಾಮಕಾರಿಯೂ  ಹೌದು. ಹೀಗಾಗಿ ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಈ ಹಿನ್ನೆಲೆಯಲ್ಲಿ ಚುಟುಕು ಸಾಹಿತ್ಯಕ್ಕೆ ಉತ್ತೇಜನ ನೀಡುವಂತೆ ನಾನು ಮತ್ತು ಮಾಜಿ ಎಂಎಲ್‍ಸಿ ತೋಂಟದಾರ್ಯ ಇಬ್ಬರೂ ಸೇರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದರು.

ಪ್ರಸ್ತುತ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಲಾಗುತ್ತಿದೆ. ಆದರೆ ಮಾನವ ಕುಲದ ಬದುಕಿಗೆ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂಬುದರ ಅರಿವು ಮೂಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದ್ದು, ಬಹುತೇಕ ಯುವ ಸಮುದಾಯ ಮತ್ತು ಸಮಾಜ ಇದರಿಂದ ದಿಕ್ಕು ತಪ್ಪುವಂತಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳುವ ಹಾಗೇ ಸಾಮಾಜಿಕ ಮಾಧ್ಯಮಕ್ಕೆ ಕಡಿವಾಣ ಅನಿವಾರ್ಯವಾಗಿದೆ ಎಂದು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಚುಟುಕು ಸಾಹಿತ್ಯ ಸಾವಿರ ಸಾಲುಗಳಲ್ಲಿರುವ ಗದ್ಯದ ಸಾರಾಂಶವನ್ನು ನಾಲ್ಕು ಸಾಲುಗಳಲ್ಲಿ ಅನಾವರಣಗೊಳಿಸುವ ವಿಶಿಷ್ಟ ಸಾಹಿತ್ಯ ಪ್ರಾಕಾರ. ಇಂತಹ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ಉಲ್ಲಾಸದೊಂದಿಗೆ ಸಂದೇಶವೂ ಮೂಡಿಬರಬೇಕು ಎಂದು ಹೇಳಿದರು.

ಇದೇ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ತಾವರೆಕೆರೆಯ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ `ಚುಟುಕು ಚಂದನ’ ಕೃತಿ ಬಿಡುಗಡೆ ಮಾಡಿದರು. ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಪುಸ್ತಕ ಕುರಿತು ಮಾತನಾಡಿದರು. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ತೋಂಟ ದಾರ್ಯ ಅಧ್ಯಕ್ಷತೆ ವಹಿಸಿದ್ದರು. `ಚುಟುಕು ಚಂದನ’ ಸಂಪಾದಕಿ ಡಾ.ರತ್ನ ಹಾಲಪ್ಪಗೌಡ, ಶ್ರೀಶಿವರಾತ್ರೀಶ್ವರ ಮಹಿಳಾ ಸಮಾಜದ ಮಮತ ಸುರೇಶ್ ಮತ್ತಿತರರು ಹಾಜರಿದ್ದರು.

Translate »