ಸಂತ್ರಸ್ತರಿಗೆ ನೆರವಾಗುವುದರಲ್ಲೂ `ರಾಜಕೀಯ’
ಕೊಡಗು

ಸಂತ್ರಸ್ತರಿಗೆ ನೆರವಾಗುವುದರಲ್ಲೂ `ರಾಜಕೀಯ’

August 22, 2018

ಮಾದಾಪುರ: ಕೊಡಗು ಜಿಲ್ಲೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸತ್ಕಾರ್ಯದಲ್ಲೂ ಇದೀಗ ರಾಜಕೀಯ ಮೇಲಾಟ ಆರಂಭವಾಗಿದ್ದು, ಈವರೆಗೆ ಪಕ್ಷಾತೀತ, ಜಾತ್ಯಾತೀತ ವಾಗಿ ಸಂತ್ರಸ್ತರ ನೆರವಿಗೆ ನಿಂತಿದ್ದವರು ಹಿಂದೆ ಸರಿಯುವ ದುಸ್ಥಿತಿ ನಿರ್ಮಾಣವಾಗುತ್ತಿದೆ.

ಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರ ನೆರವಿಗೆ ಇಡೀ ರಾಜ್ಯವೇ ಮುಂದಾಗಿದೆ. ಮೈಸೂರು, ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ ಹೀಗೆ ಎಲ್ಲಾ ಜಿಲ್ಲೆಗಳಿಂದ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳ ಮಹಾಪೂರವೇ ಹರಿದು ಬರುತ್ತಿದೆ. ಈವರೆಗೆ ದಾನಿಗಳು ನೀಡಿದ ವಸ್ತುಗಳನ್ನು ದುರುಪಯೋಗವಾಗದಂತೆ ಸ್ಥಳೀಯ ಸ್ವಯಂ ಸೇವಕರು ಸಂತ್ರಸ್ತರಿಗೆ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದ್ದರು. ಆದರೆ ಇಂದಿನಿಂದ ಪರಿಹಾರದ ನೆಪದಲ್ಲಿ ರಾಜಕೀಯ ನುಸುಳಿದೆ ಎನ್ನಲಾಗಿದೆ.

ರಾಜಕೀಯ ಪಕ್ಷಗಳ ಬಾವುಟದೊಂದಿಗೆ ಅಗತ್ಯ ವಸ್ತುಗಳನ್ನು ತುಂಬಿದ ವಾಹನಗಳ ಸಂಚಾರ ಹೆಚ್ಚಾಗಿದೆ. ರಾಜಕೀಯ ನಾಯಕರ ಫೋಟೋ ಸಹಿತ ಅಕ್ಕಿ ಮೂಟೆಗಳು, ಆಹಾರ ಪದಾರ್ಥಗಳ ಪ್ಯಾಕೆಟ್‍ಗಳು ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ತಲುಪುತ್ತಿವೆ. ಈ ಮೂಲಕ ನೊಂದವರ ಮನದಲ್ಲಿ ಪಕ್ಷದ ಬಗ್ಗೆ ಒಲವು ಬಿತ್ತುವ ಕೀಳು ರಾಜಕೀಯ ಆರಂಭವಾಗಿದೆ. ನೆರೆಯಿಂದ
ತತ್ತರಿಸುವ ನೆಲದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರಗಾರಿಕೆ ನಡೆಸಲಾ ಗುತ್ತಿದೆ. ಅನೇಕ ಕಡೆಗಳಲ್ಲಿ ಹೀಗೆ ರಾಜಕೀಯ ಪಕ್ಷ ಹಾಗೂ ನಾಯಕರ ಪ್ರಚಾರವುಳ್ಳ ವಸ್ತುಗಳನ್ನು ಪಡೆಯಲು ಹಿಂದೇಟು ಹಾಕಿರುವ ಪ್ರಸಂಗವೂ ನಡೆದಿದೆ. ಪರಿಹಾರ ನೀಡುವುದರಲ್ಲೂ ರಾಜಕೀಯ ನುಸುಳಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು, ಸಂತ್ರಸ್ತರ ನೆರವಿಗೆ ನಿಂತಿದ್ದವರು ಹಿಂದೆ ಸರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿರ್ವಹಣೆ ಸಮರ್ಪಕವಾಗಿಲ್ಲ: ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತ ವಾಹನಗಳು ಕೊಡಗಿಗೆ ನಿರಂತರವಾಗಿ ಬರುತ್ತಿವೆ. ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ನಿಜವಾದ ಸಂತ್ರಸ್ತರಿಗೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ವಾಹನಗಳಲ್ಲಿ ವಸ್ತುಗಳನ್ನು ತುಂಬಿ ಕೊಡಗಿಗೆ ತಲುಪಿಸುವಂತೆ ಕಳುಹಿಸಲಾಗುತ್ತದೆ. ಆದರೆ ಎಲ್ಲಿಗೆ ತಲುಪಿಸಬೇಕು, ಯಾರಿಗೆ ತಲುಪಿಸಬೇಕೆಂಬ ಮಾಹಿತಿ ಇರುವುದಿಲ್ಲ. ವಾಹನದ ಚಾಲಕ ಹಾಗೂ ಆತನ ಸಹಾಯಕನ ಹೊರತು ವಸ್ತುಗಳನ್ನು ಕಳುಹಿಸಿದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಜೊತೆಯಲ್ಲಿರದ ಕಾರಣ ಎಲ್ಲೆಂದರಲ್ಲಿ ವಸ್ತುಗಳನ್ನು ಹಂಚಲಾಗುತ್ತದೆ. ಇನ್ನು ಬೆಂದ ಮನೆಯಗಳ ಹಿರಿಯುವಂತೆ ಕೆಲವರು ಯಾವುದೇ ತೊಂದರೆಗೆ ಸಿಲುಕದವರೂ ಸಂತ್ರಸ್ತರ ಸೋಗಿನಲ್ಲಿ ವಸ್ತುಗಳನ್ನು ಪಡೆಯುತ್ತಿದ್ದಾರೆ. ಕೊಡಗಿಗೆ ಬಂದ ವಾಹನಗಳೆಷ್ಟು, ಯಾವ ಪರಿಹಾರ ಕೇಂದ್ರಕ್ಕೆ ವಸ್ತುಗಳನ್ನು ನೀಡಲಾಗಿದೆ ಎಂಬುದನ್ನು ಕೇಳುವವರೇ ಇಲ್ಲ. ಇದಕ್ಕೆ ಮಾದಾಪುರ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದ ದುಸ್ಥಿತಿಯೇ ಸಾಕ್ಷಿ. ಮಾದಾಪುರ ಮಾರ್ಗದಲ್ಲಿ ದಾನಿಗಳ ವಾಹನಗಳು ಹೋದರೂ ಪರಿಹಾರ ಕೇಂದ್ರವನ್ನು ತಲುಪುತ್ತಿಲ್ಲ. ಮಾರ್ಗಮಧ್ಯೆಯೇ ಖಾಲಿ ಮಾಡಿ ಹೋಗುತ್ತಿದ್ದಾರೆ. ಇದರಿಂದ ಅಲ್ಲಿರುವ ನೂರಾರು ಸಂತ್ರಸ್ತರು ಸರಿಯಾಗಿ ಊಟವೂ ಇಲ್ಲದೆ ನರಳಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲಾಡಳಿತ ಇದನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಕುಶಾಲನಗರದಲ್ಲೇ ಒಂದು ಕೇಂದ್ರವನ್ನು ತೆರೆದು ಎಲ್ಲಾ ವಸ್ತುಗಳನ್ನೂ ಅಲ್ಲಿಯೇ ದಾಸ್ತಾನು ಮಾಡಿ, ಅಲ್ಲಿಂದ ಪರಿಹಾರ ಕೇಂದ್ರಗಳಿಗೆ ಬೇಕಾದಷ್ಟು ವಸ್ತುಗಳನ್ನು ಪೊಲೀಸ್ ಭದ್ರತೆಯಲ್ಲಿ ಸರಬರಾಜು ಮಾಡಬೇಕೆಂದು ಆಗ್ರಹಿಸಿದ್ದಾರೆ.

Translate »