ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ತೀವ್ರ ಕುಸಿತ
ಮೈಸೂರು

ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ತೀವ್ರ ಕುಸಿತ

June 19, 2018
  •  ಸಾವಿರ ಗಡಿ ತಲುಪುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ ಕೇವಲ 122ಕ್ಕೆ ಇಳಿಕೆ
  • ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಭೇಟಿ

ಮೈಸೂರು: ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿ ಮುಖವಾಗುತ್ತಿರುವ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಆತಂಕ ವ್ಯಕ್ತಪಡಿಸಿದರು. ಸೋಮವಾರ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಆ ಶಾಲೆಗಳ ಮಕ್ಕಳ ಪೋಷಕರೊಂದಿಗೆ ಸಮಾಲೋಚಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳು ವಂತೆ ಸೂಚನೆ ನೀಡಿದರು. 1833ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪನೆ ಗೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾದ ಮಹನೀಯರಿಗೆ ಶಿಕ್ಷಣ ನೀಡಿದ ಮಹಾರಾಜ ಪಿಯು ಕಾಲೇಜಿನ ಪ್ರೌಢಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗಿನ ವರ್ಷಗಳಲ್ಲಿ ಇಳಿಮುಖವಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಶಾಲೆಗೆ ಭೇಟಿ ನೀಡಿದ ಸಚಿವ ಎನ್.ಮಹೇಶ್, ಪರಿಶೀಲನೆ ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಸ್.ಮಮತಾಮಹಾರಾಜ ಪಿಯು ಕಾಲೇಜಿನ ಪ್ರಾಂಶುಪಾಲ ಟಿ.ಆರ್.ಸಿದ್ದರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳಿಂದ ಕಾಲೇಜು ಹಾಗೂ ಶಾಲೆಯ ಮೂಲ ಸೌಲಭ್ಯ ಸೇರಿದಂತೆ ಅನೇಕ ವಿಷಯಗಳ ಸಂಬಂಧ ಮಾಹಿತಿ ಪಡೆದರು. ಅಲ್ಲದೆ, ಶಾಲಾ ಕೊಠಡಿಗಳಿಗೆ ಭೇಟಿ ನೀಡಿದ್ದ ಅವರು, ಕೆಲ ವಿದ್ಯಾರ್ಥಿಗಳನ್ನು ಮಾತಿಗೆಳೆದರು.

ಇಲಾಖಾಧಿಕಾರಿಗಳ ದೌರ್ಬಲ್ಯ: ಮಹಾರಾಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ದೌರ್ಬಲ್ಯ ಕಾರಣವಾಗಿದೆ ಎಂದು ಹೇಳಿ, ಸಚಿವ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

185 ವರ್ಷಗಳ ಇತಿಹಾಸ, ಮೇಧಾವಿಗಳು ಹೊರಹೊಮ್ಮಿದ ಪರಂಪರೆ ಇರುವ ಶಾಲೆಯ ಈ ಪರಿಸ್ಥಿತಿ ಬೇಸರ ಉಂಟು ಮಾಡಿದೆ. 700ರಿಂದ 800 ವಿದ್ಯಾರ್ಥಿಗಳು ದಾಖಲಾಗುತ್ತಿದ್ದ ಶಾಲೆಯಲ್ಲಿ ಇದೀಗ ಕೇವಲ 122 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಈ ದುಸ್ಥಿತಿಗೆ ಶಾಲೆಯಲ್ಲಿ ಸೌಲಭ್ಯದ ಕೊರತೆ ಕಾರಣವೇ ಎಂದು ನೋಡಿದರೆ, ಇಲ್ಲಿ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ಉತ್ತಮ ಸೌಲಭ್ಯಗಳಿವೆ. ನನ್ನ ಮಗ ಕೂಡ ಇದೇ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು ಎಂದು ನೆನಪಿಸಿಕೊಂಡರು.

ಇಲ್ಲಿನ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಯಾವುದೇ ಕೊರತೆ ಇಲ್ಲ. ಸುಮಾರು 2 ಸಾವಿರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖದ ಬಗ್ಗೆ ವಿಚಾರ ಮಾಡಿದಾಗ, ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ ಅಧಿಕವಿದೆ. ಈ ಶಾಲೆಗೆ ದಾಖಲಾಗಬೇಕಿದ್ದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಸಾದ ವಿದ್ಯಾರ್ಥಿಗಳು ತಮ್ಮ ನಿವಾಸಗಳ ಸಮೀಪದ ಪ್ರೌಢಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂಬ ಸಂಗತಿಯನ್ನು ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ತಮ್ಮ ವಾಸಸ್ಥಳದ ಹತ್ತಿರದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರೆ ಚಿಂತೆಯಿಲ್ಲ, ಅವೂ ನಮ್ಮ ಶಾಲೆಗಳೇ ಆಗಿವೆ ಎಂದರು.

ನಗರದ ವ್ಯಾಪ್ತಿಯಲ್ಲಿರುವ 22 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಹೊರಬರುವ ಸುಮಾರು 4 ಸಾವಿರ ಮಕ್ಕಳಲ್ಲಿ ಶೇ.60ರಷ್ಟು, ಅಂದರೆ 3 ಸಾವಿರ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ ಎಂಬುದು ಅಧಿಕಾರಿಗಳು ನೀಡಿದ ಅಂಕಿ-ಅಂಶ. ಈ 3 ಸಾವಿರ ವಿದ್ಯಾರ್ಥಿಗಳಲ್ಲಿ ಕೇವಲ 500 ಮಂದಿ ವಿದ್ಯಾರ್ಥಿಗಳನ್ನು ಮಹಾರಾಜ ಪ್ರೌಢಶಾಲೆಗೆ ದಾಖಲು ಮಾಡಿಸಲು ಸಾಧ್ಯವಾಗಿಲ್ಲ ಎಂದರೆ ಅದು ಅಧಿಕಾರಿಗಳ ದೌರ್ಬಲ್ಯ ಎಂದು ಅಭಿಪ್ರಾಯಪಟ್ಟರು.

ದಾಖಲಾತಿ ಹೆಚ್ಚಿಸಲು ಪರಿಣಾಮಕಾರಿ ಕಾರ್ಯಕ್ರಮವಿಲ್ಲ: ಮಹಾರಾಜ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಿದಂತೆ ಕಾಣಲಿಲ್ಲ. ಕೇವಲ ಕೈಪಿಡಿ ಸಿದ್ಧಪಡಿಸಿ ವಿತರಣೆ ಮಾಡಿದ್ದಾರೆ. ಪ್ರಾಯೋಗಿಕವಾಗಿ ಈ ಕ್ರಮ ಪರಿಣಾಮಕಾರಿ ಆಗಲಾರದು. ಖುದ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ಸಮಾಲೋಚಿಸಿ ಜೊತೆಗೆ ಪೋಷಕರ ಸಭೆಗಳನ್ನು ಏರ್ಪಡಿಸಿ, ಈ ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರಲು ಪ್ರಯತ್ನಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಶಾಲೆಗೆ ಬಸ್ ಸೌಲಭ್ಯ, ವಿದ್ಯಾರ್ಥಿನಿಲಯ: ಈ ಶಾಲೆಯ ಭವ್ಯ ಪರಂಪರೆ ಉಳಿಯಬೇಕು. ಈ ನಿಟ್ಟಿನಲ್ಲಿ ಪ್ರಾಮಾಣ ಕ ಪ್ರಯತ್ನ ಮಾಡಲಿದ್ದೇನೆ. ಸರ್ವಶಿಕ್ಷಣ ಅಭಿಯಾನದಲ್ಲಿ ಶಾಲೆಗೆ ಬಸ್ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಈ ಬಗ್ಗೆಯೂ ಸೂಕ್ತ ಕ್ರಮ ವಹಿಸಲಾಗುವುದು. ಜೊತೆಗೆ ಶಾಲಾ ದಾಖಲಾತಿ ಹೆಚ್ಚಳಕ್ಕಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಸ್ಥಾಪಿಸಲು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಆಗ್ರಹವಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ 3 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಮಹಾರಾಜ ಪಿಯು ಕಾಲೇಜಿನ ನವೀಕರಣ ಕಾಮಗಾರಿ ಪರಿಶೀಲಿಸಿದ ಸಚಿವ ಎನ್.ಮಹೇಶ್, ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಮುಮ್ಮಡಿಗೆ ನಮನ: ಇದೇ ವೇಳೆ ಕಾಲೇಜಿನ ಮುಂಭಾಗದಲ್ಲಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಎನ್.ಮಹೇಶ್ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಮಹಾರಾಜ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಎಸ್.ಶ್ರೀಧರ ರಾಜ್‍ಅರಸ್, ದಕ್ಷಿಣ ವಲಯದ ಬಿಇಓ ಶಿವಕುಮಾರ್, ಇಓಗಳಾದ ರಾಜಶೇಖರ್, ಡಿ.ಉದಯ ಕುಮಾರ್, ಡಿವೈಪಿಸಿ ಬಸವರಾಜು, ಮಹಾರಾಜ ಪ್ರೌಢಶಾಲೆಯ ಉಪಪ್ರಾಂಶುಪಾಲ ಡಾ.ಡಿ.ಮಹೇಶ್ ಮತ್ತಿತರರು ಹಾಜರಿದ್ದರು.

ಪ್ರತಿ ವಿದ್ಯಾರ್ಥಿಗೆ ಸಾವಿರ ರೂ. ಪ್ರೋತ್ಸಾಹ ಧನ

ಮಹಾರಾಜ ಪ್ರೌಢಶಾಲೆಗೆ ಜೂ.18ರಿಂದ ದಾಖಲಾಗುವ ಅರ್ಹ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಮಹಾರಾಜ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ನಿರ್ಧರಿಸಿದೆ. ಈ ಬಗ್ಗೆ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎಸ್.ಶ್ರೀಧರ ರಾಜ್ ಅರಸ್, ಸದ್ಯ ಜೂ.18ರಿಂದ ದಾಖಲಾಗುವ 10 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ನೀಡಲು ನಿರ್ಧರಿಸಿದ್ದು, 10 ವಿದ್ಯಾರ್ಥಿಗಳ ಬಳಿಕ ಪ್ರವೇಶ ಪಡೆದಲ್ಲಿ ಅವರಿಗೆ ಪ್ರೋತ್ಸಾಹ ಧನ ಕೊಡುವ ಬಗ್ಗೆ ತದನಂತರ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

Translate »