ತಾಳತ್ತಮನೆ ಬಳಿ ಹೆದ್ದಾರಿಯಲ್ಲಿ ಗುಂಡಿ
ಕೊಡಗು

ತಾಳತ್ತಮನೆ ಬಳಿ ಹೆದ್ದಾರಿಯಲ್ಲಿ ಗುಂಡಿ

July 30, 2018

ಮಡಿಕೇರಿ:  ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳತ್ತಮನೆ ಸಮೀಪ ರಸ್ತೆಯ ಮಧ್ಯದಲ್ಲಿ ಬೃಹತ್ ಗುಂಡಿ ಬಿದ್ದಿದೆ.

ಅಂತರ್ಜಲದಿಂದ ಈ ಗುಂಡಿ ಉದ್ಭವವಾಗಿದ್ದು, ವಾಹನ ಸಂಚಾರ ದುಸ್ಥರವಾಗಿ ಪರಿಣಮಿಸಿದೆ. ಹೆದ್ದಾರಿಯ ತಿರುವಿನಲ್ಲೇ ಬೃಹತ್ ಹೊಂಡ ಸೃಷ್ಟಿಯಾಗಿರುವುದರಿಂದ ಮಲ್ಟಿ ಆ್ಯಕ್ಸಿಲ್ ಲಾರಿಗಳು ಮತ್ತು ಬಸ್‍ಗಳ ಸಂಚಾರಕ್ಕೆ ಸಂಚಕಾರವಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅಪಾಯದ ಸೂಚನೆ ಫಲಕ ಅಳವಡಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಹೆದ್ದಾರಿಯ ಹೊಂಡಕ್ಕೆ ಕಲ್ಲುಗಳನ್ನು ಹಾಕಿ ಮುಚ್ಚಿದ್ದರು ಕೂಡ ಅಧಿಕ ಭಾರ ಹೊತ್ತು ಸಾಗುತ್ತಿರುವ ಲಾರಿಗಳಿಂದಾಗಿ ಮತ್ತಷ್ಟು ಗುಂಡಿ ಸೃಷ್ಟಿಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನಗಳಿಗೆ ಇದರಿಂದ ಅಪಾಯ ಎದುರಾಗುವ ಸಾಧ್ಯತೆಯಿದ್ದು, ಶೀಘ್ರವೆ ದುರಸ್ತಿ ಕಾರ್ಯ ಮಾಡದಿದ್ದರೆ ಭಾರಿ ಅನಾಹುತ ಎದುರಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಕಾಟಕೇರಿ ಬಳಿ ರಸ್ತೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದರೆ, ಮತ್ತೊಂದು ಕಡೆ ಬಿರುಕು ಮೂಡಿ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ ಕೂಡ ಅಂತರ್ಜಲದಿಂದಾಗಿ ರಸ್ತೆಗಳು ದುಸ್ಥಿತಿಗೆ ತಳ್ಳಲ್ಪಟ್ಟಿವೆ.

Translate »