ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೈಸೂರಲ್ಲಿ ಹಿಂದೂ ಪರ ಸಂಘಟನೆಗಳ ಶಕ್ತಿ ಪ್ರದರ್ಶನ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೈಸೂರಲ್ಲಿ ಹಿಂದೂ ಪರ ಸಂಘಟನೆಗಳ ಶಕ್ತಿ ಪ್ರದರ್ಶನ

December 23, 2019

ಮೈಸೂರು,ಡಿ.22(ಎಂಟಿವೈ)- ಪೌರತ್ವ ತಿದ್ದುಪಡಿ ಕಾಯ್ದೆ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿ ಮೈಸೂರು ವಿವಿಯ ಓವೆಲ್ ಮೈದಾನ ದಲ್ಲಿ ಭಾನುವಾರ ವಿವಿಧ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿ ತ್ವರಿತಗತಿಯಲ್ಲಿ ಕಾಯ್ದೆ ಅನುಷ್ಠಾನಕ್ಕೆ ತಂದು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವಂತೆ ಆಗ್ರಹಿಸಿದರು.

ಅರಮನೆ ಮುಂಭಾಗದಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಲು ಉದ್ದೇಶಿ ಸಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘ ಟನೆಗಳ ಕಾರ್ಯಕರ್ತರಿಗೆ ಪೊಲೀಸರು ಮೆರವಣಿಗೆ ನಡೆಸದಂತೆ ಎಚ್ಚರಿಕೆ ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಓವೆಲ್ ಮೈದಾನದಲ್ಲಿ ತ್ರಿವರ್ಣ ಧ್ವಜ ಹಿಡಿದು, ಭಾರತ ಮಾತೆ, ಪ್ರಧಾನಿ ಮೋದಿ ಹಾಗೂ ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ದೇಶವನ್ನು ಸುಭದ್ರ ವಾಗಿ ಕಟ್ಟುವ ನಿಟ್ಟಿನಲ್ಲಿ ಮೋದಿ ಹಾಗೂ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ತರುವ ಮೂಲಕ ಮಹತ್ತರ ನಿರ್ಣಯ ಕೈಗೊಂಡಿ ದ್ದಾರೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿರುವುದರ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ನೀಡಿ, ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿ ಸುತ್ತಿವೆ. ದೇಶದ ಹಿತದೃಷ್ಟಿಯಿಂದ ಸಿಎಎ ಅನುಷ್ಠಾನಗೊಳಿಸಬೇಕು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.

ಇದೇ ವೇಳೆ ಬಿಜೆಪಿ ಹಿರಿಯ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟ ದಾರ್ಯ ಮಾತನಾಡಿ, ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದು ಇದೇ ಮೊದಲನೇ ಬಾರಿಯಲ್ಲ. ಈ ಹಿಂದೆಯೂ ದೇಶದ ಭದ್ರತೆಗಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವಂತಹ ಪ್ರಯತ್ನ ನಡೆದಿತ್ತು. ಬಾಂಗ್ಲಾ ಸೇರಿದಂತೆ ವಿವಿಧ ದೇಶಗಳಿಂದ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ದೇಶಕ್ಕೆ ಅಪಾಯವಾಗುತ್ತಿದೆ. ನುಸುಳುಕೋರರು ದೇಶದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪೌರತ್ವ ಕಾಯ್ದೆಗೆ ಈ ಹಿಂದೆಯೇ ತಿದ್ದುಪಡಿ ತಂದು ಅಕ್ರಮವಾಗಿ ವಲಸೆ ಬಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿತ್ತು ಎಂದರು. ದೇಶದ ಮೂಲ ನಿವಾಸಿಗಳಿಗೆ ನುಸುಳು ಕೋರರಿಂದ ಅಪಾಯ ಕಟ್ಟಿಟ್ಟ ಬುತ್ತಿ. ದಿನದಿಂದ ದಿನಕ್ಕೆ ಈ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಸಮಸ್ಯೆಯ ತೀವ್ರತೆ ಹೆಚ್ಚಾಗುತ್ತಿರುವುದನ್ನು ಮನಗಂಡು ಮೋದಿ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದೇಶದಲ್ಲಿ ಸಾಮರಸ್ಯ ಮುಂದುವರೆಯಲು, ಎಲ್ಲಾ ಸಮುದಾಯ ಜನರು ಸಹಬಾಳ್ವೆ ಜೀವನ ನಡೆಸಲು ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಶ್ಲಾಘನೀಯ. ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರಾಮದಾಸ್, ಮುಖಂಡರಾದ ಬಿ.ಪಿ.ಮಂಜುನಾಥ್, ಎಂ.ಮಲ್ಲಪ್ಪಗೌಡ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಾಜಿ ಉಪಮೇಯರ್ ರತ್ನ ಲಕ್ಷ್ಮಣ, ಮುಖಂಡರಾದ ಆನಂದ್, ಅರುಣ್‍ಕುಮಾರ್ ಗೌಡ, ಸು.ಮುರುಳಿ, ಗಿರಿಧರ್, ಜೋಗಿ ಮಂಜು, ರಾಕೇಶ್ ಭಟ್, ನಿಶಾಂತ್, ವತ್ಸಲ, ಹೇಮಲತಾ, ನೇಹ, ಕಾವೇರಿ, ಸರ್ವಮಂಗಳ, ಭಾಗ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »