ದಸರಾ ದೀಪಾಲಂಕಾರಕ್ಕೆ ಪೂರ್ವ ಸಿದ್ಧತೆ
ಮೈಸೂರು

ದಸರಾ ದೀಪಾಲಂಕಾರಕ್ಕೆ ಪೂರ್ವ ಸಿದ್ಧತೆ

August 10, 2018

ಮೈಸೂರು:  ಮೈಸೂರು ದಸರಾ, ಎಷ್ಟೊಂದು ಸುಂದರ ಚೆಲ್ಲಿರಿ ನಗೆಯಾ ಪನ್ನೀರಾ… ಹಾಡಷ್ಟೇ ಅಲ್ಲ ನಮ್ಮ ನಾಡಿನ ಹೆಮ್ಮೆಯ ಮೈಸೂರು ದಸರಾವು ಅಷ್ಟೇ ಸುಂದರ. ದಸರಾ ಸಮೀಪಿಸುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವದ ವೇಳೆ ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರಗು ನೀಡಿ, ನಗರವನ್ನು ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲು ಈಗಾಗಲೇ ಸೆಸ್ಕಾಂ ಸಜ್ಜಾಗಿದೆ.

ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವೃತ್ತ ಕಚೇರಿಯಲ್ಲಿ ಗುರುವಾರ ನಡೆದ `ದಸರಾದಲ್ಲಿ ದೀಪಾಲಂಕಾರ ಮಾಡುವ ಕುರಿತ’ ಸಭೆಯಲ್ಲಿ ಮೈಸೂರು ಸುತ್ತಮುತ್ತಲಿನ 15ಕ್ಕೂ ಹೆಚ್ಚು ಕಂಪೆನಿಗಳ ಕೈಗಾರಿಕೋದ್ಯಮಿ ಗಳು ಭಾಗವಹಿಸಿ, ದಸರಾದಲ್ಲಿ ದೀಪಾಲಂಕಾರ ಮಾಡುವ ಕುರಿತು ಚರ್ಚಿಸಿದರು. ಈ ವೇಳೆ 13 ಕಂಪೆನಿಗಳು ದೀಪಾಲಂಕಾರ ಮಾಡುವ ವೃತ್ತದ ಹೆಸರುಗಳನ್ನು ಪ್ರಸ್ತಾಪಿಸಿದರು.

ಕಂಪೆನಿ-ವೃತ್ತಗಳು: ಆಟೋಮೋಟಿವ್ ಆಕ್ಸೆಲ್-ರಾಮಸ್ವಾಮಿ ವೃತ್ತ ಮತ್ತು ಐಶ್ವರ್ಯ ಪೆಟ್ರೋಲ್ ಬಂಕ್, ಟಿವಿಎಸ್ ಕಂಪೆನಿ- ಹಾರ್ಡಿಂಜ್ ವೃತ್ತ, ಮಾಲ್ ಆಫ್ ಮೈಸೂರು-ಕುರುಬಾರಹಳ್ಳಿ ವೃತ್ತ, ಜೆ.ಕೆ.ಟೈರ್-ರೈಲು ನಿಲ್ದಾಣ ವೃತ್ತ, ಎಸ್‍ಬಿಐ-ಆಯರ್ವೇದಿಕ್ ವೃತ್ತ, ರಾಣೆ ಮಡ್ರಾಸ್-ಮೆಟ್ರೋಪೊಲ್ ವೃತ್ತ, ನಾರಾಯಣ ಹೃದಯಾಲಯ ಮತ್ತು ಕೊಲಂಬಿಯಾ ಏಷಿಯಾ ಆಸ್ಪತ್ರೆ-ಕೊಲಂಬಿಯಾ ಏಷಿಯಾ ವೃತ್ತ, ಆರ್ಯವೈದ್ಯ ಶಾಲೆ-ಆರ್‍ಟಿಓ ವೃತ್ತ. ಹೋಟೆಲ್ ಫೋರಂ-ಕೆ.ಆರ್.ವೃತ್ತ, ಗೋಪಾಲಗೌಡ ಆಸ್ಪತ್ರೆ- ನಜರ್‍ಬಾದ್ ಪೊಲೀಸ್ ಠಾಣೆ ವೃತ್ತ, ರಂಗರಾವ್ ಅಂಡ್ ಸನ್ಸ್-ಅಗ್ರಹಾರ ವೃತ್ತ, ಕಡಕೊಳದ ಎಸ್‍ಕೆಎಫ್- ಮೈಸೂರು-ನಂಜನಗೂಡು ರಸ್ತೆಯ ರಿಂಗ್‍ರೋಡ್ ಸೇರುವ ವೃತ್ತ ಹಾಗೂ ಕುವೆಂಪುನಗರದ ಚಾ.ವಿ.ಸ.ನಿ.ನಿಯಮಿತ ವೃತ್ತ ಕಚೇರಿಯು ಸಯ್ಯಾಜಿರಾವ್ ವೃತ್ತ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಒಪ್ಪಿಗೆ ಸೂಚಿಸಿದರು.

ಇನ್ನು ಕೆಲವು ವೃತ್ತಗಳಿಗೆ ದೀಪಾಲಂಕಾರ ಮಾಡಬೇಕಿದ್ದು, ಕೆಲವು ಕೈಗಾರಿ ಕೋದ್ಯಮಿಗಳು ಸಭೆಗೆ ಗೈರಾಗಿದ್ದಾರೆ. ಇನ್ನೊಂದು ದಿನ ಸಭೆ ಕರೆದು ದೀಪಾಲಂಕಾರ ಮಾಡುವ ಕುರಿತು ಅಂತಿಮಗೊಳಿಸಲಾಗುವುದು ಎಂದು ಸೆಸ್ಕಾಂನ ಕುವೆಂಪುನಗರ ವೃತ್ತಕಚೇರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೋಮರಾಜ್ ತಿಳಿಸಿದರು. ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಶ್ರೀನಿವಾಸ ಮೂರ್ತಿ, ಎನ್.ಆರ್.ಮೊಹಲ್ಲಾ ವಿಭಾಗದ ಎಕ್ಸಿಕ್ಯುಟೀವ್ ಇಂಜಿನಿಯರ್ ಸ್ವಾಮಿ, ವಿವಿ ಮೊಹಲ್ಲಾ ವಿಭಾಗದ ರಾಮಚಂದ್ರ, ನಂಜಗೂಡು ವಿಭಾಗದ ಇಂಜಿನಿಯರ್ ರಾಮಚಂದ್ರ ಸೇರಿದಂತೆ ಎಇಇ, ವಿವಿಧ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Translate »