ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಡಿ.ಸಿ.ತಮ್ಮಣ್ಣ
ಮಂಡ್ಯ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಡಿ.ಸಿ.ತಮ್ಮಣ್ಣ

July 5, 2018

ಮದ್ದೂರು: ‘ನಾನು ಶಾಸಕನಾಗಿ ಬಂದ ಮೇಲೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ನನ್ನ ಗುರಿಯಾಗಿದೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ತಾಲೂಕಿನ ಸಮೀಪದ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಜಿಟಿಟಿಸಿ ಉಪಕೇಂದ್ರದ ನೂತನ ಆಡಳಿತ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 992ಲಕ್ಷ ರೂ. ವೆಚ್ಚ ದಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದ್ದು, ಬೆಂಗಳೂರಿನ ಪ್ರತಿಷ್ಠಿತ ಉಷಾ ಕನ್​ಷ್ಟ್ರಕ್ಷನ್  ಸಂಸ್ಥೆಯು ಈ ಕಟ್ಟಡ ನಿರ್ಮಾಣ ಮಾಡುತ್ತಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಟಿಟಿಸಿ ಕಾಲೇಜಿನ ಆವರಣದ ಕಾಂಪೌಂಡ್ ನಿರ್ಮಾಣ ಸೇರಿದಂತೆ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಒದಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ, ಸದಸ್ಯ ಮರಿಹೆಗಡೆ, ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ಎಸ್.ಆರ್.ಸತೀಶ್, ಚಿಕ್ಕಮರಿಯಪ್ಪ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಘು, ಮೈಸೂರು ವಿಭಾಗದ ಸಹಾ ಯಕ ವ್ಯವಸ್ಥಾಪಕ ಎಚ್.ಎಂ.ರಾಧಾಕೃಷ್ಣ, ಪ್ರಾಂಶುಪಾಲ ಎಂ.ಗೀತಾಕೃಷ್ಣ, ಉಷಾ ಕನ್​ಷ್ಟ್ರಕ್ಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ರಾಹುಲ್, ಮುಖಂಡರಾದ ಚಿಕ್ಕತಿಮ್ಮೇಗೌಡ, ಸಿ.ಟಿ.ಶಂಕರ್, ಎಸ್.ಪಿ. ಸ್ವಾಮಿ, ಹನುಮಂತೇಗೌಡ, ಶೇಖರ್, ಕೆ.ದಾಸೇಗೌಡ, ಪ್ರಕಾಶ್, ಸಿ.ಕೆ.ಸ್ವಾಮಿಗೌಡ, ಎನ್.ಆರ್.ಪ್ರಕಾಶ್, ಉಮೇಶ್ ಹಾಜರಿದ್ದರು.

ರೈತರ ಸಾಲ ಮನ್ನಾ ಖಚಿತ

‘ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡುವುದು ಖಚಿತ’ ಎಂದು ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ನಾಳೆ ಬಜೆಟ್‍ನಲ್ಲಿ ಮುಖ್ಯ ಮಂತ್ರಿಗಳು ಈ ವಿಚಾರ ಘೋಷಣೆ ಮಾಡಲಿದ್ದಾರೆ. ಶಾಸಕರ ನಿಧಿಯನ್ನು ಸಾಲಮನ್ನಾಕ್ಕೆ ಬಳಕೆ ಮಾಡುತ್ತಿರುವುದು ಸಂತಸದ ಸಂಗತಿ. ಈ ವಿಚಾರದಲ್ಲಿ ಯಾವುದೇ ಬೇಸರವಿಲ್ಲ ಎಂದು ತಿಳಿಸಿದರು.

ಮೈಷುಗರ್ ಕಾರ್ಖಾನೆ ಪುನರು ಜ್ಜೀವನ ಕುರಿತು ಎಲ್ಲಾ ಶಾಸಕರು ಸಭೆ ಕರೆದು ಕಾರ್ಖಾನೆ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದ ಅವರು, ತಮಿಳುನಾಡಿಗೆ ನೀರು ಬಿಡುವ ಕುರಿತು ಸಿಎಂ ಎಚ್.ಡಿ. ಕುಮಾರಸ್ವಾಮಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Translate »