ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ
ಮಂಡ್ಯ

ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ

July 5, 2018
  • ಬೆಂಗಳೂರಿನ ಭಕ್ತರ ಮನೆಯಲ್ಲಿ ಹೃದಯಾಘಾತ, ಭಕ್ತರು-ಗಣ್ಯರಿಂದ ಸಂತಾಪ

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ(60) ಅವರು ಬುಧವಾರ ಮುಂಜಾನೆ 5.30ರಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

ಬೆಂಗಳೂರಿನ ಭಕ್ತರ ಮನೆಗೆ ತೆರಳಿದ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಭಕ್ತರ ಕುಟುಂಬದ ವಿವಾಹಕ್ಕೆಂದು ತೆರಳಿದ್ದ ಸ್ವಾಮೀಜಿ ವಿವಾಹದಲ್ಲಿ ಪಾಲ್ಗೊಂಡ ಬಳಿಕ ಕಳೆದ ರಾತ್ರಿ ಶಾಂತಕುಮಾರ್ ಎಂಬ ಭಕ್ತರೊಬ್ಬರ ಮನೆಯಲ್ಲಿ ತಂಗಿದ್ದರು. ಭಕ್ತರ ಮನೆಯಲ್ಲಿ ಮಲಗಿದ್ದಾಗ ಬೆಳಿಗ್ಗೆ 5 ಗಂಟೆಗೆ ಪೂಜೆಗೆಂದು ಎದ್ದೇಳಿಸಿದಾಗ ಸ್ವಾಮೀಜಿ ಇಹಲೋಕ ತ್ಯಜಿಸಿದ್ದರು. ವಿಷಯ ತಿಳಿದು ಬೆಂಗಳೂರಿಗೆ ಬೇಬಿಬೆಟ್ಟದ ಕಿರಿಯಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದ್ದರು.

ಇಂದು (ಗುರುವಾರ) ಬೆಳಿಗ್ಗೆ 11 ಗಂಟೆಗೆ ಶ್ರೀಸದಾಶಿವ ಸ್ವಾಮೀಜಿ ಅವರ ಅಂತ್ಯಕ್ರಿಯೆಯೂ ವೀರಶೈವಲಿಂಗಾಯತ ಸಂಪ್ರದಾಯದಂತೆ ನೆರವೇರಲಿದೆ.

ಸ್ವಾಮೀಜಿ ಅವರು ಮೂಲತಃ ಹಾಸನ ಜಿಲ್ಲೆಯ ಸತ್ತಿಗರಹಳ್ಳಿ ಗ್ರಾಮದವರು. ಬಾಲ್ಯದಿಂದಲೂ ಸಿದ್ದಗಂಗಾಮಠದಲ್ಲಿಯೇ ಇದ್ದು ಶಿವಕುಮಾರ ಸ್ವಾಮೀಜಿ ಅವರಿಂದ ಶಿವದೀಕ್ಷೆ ಪಡೆದರು. ನಂತರ ಬೇಬಿಬೆಟ್ಟದ ಮರೀದೇವರು ಸ್ವಾಮೀಜಿಗಳ ಶಿಷ್ಯರಾದರು.

1979-80ರಲ್ಲಿ ಬೇಬಿಬೆಟ್ಟದ ಶ್ರೀರಾಮಯೋಗಿಮಠದ ಪೀಠಾಧ್ಯಕ್ಷರಾದರು. ಅಲ್ಲಿಂದ ಇಲ್ಲಿಯವರೆಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೆರಳಿ ಧರ್ಮಪ್ರಚಾರ ಮಾಡುವ ಮೂಲಕ ಅಪಾರ ಭಕ್ತರನ್ನು ಹೊಂದಿದ್ದರು.

ಸಂಜೆ 4 ಗಂಟೆಗೆ ಆಗಮಿಸಿದ ಪಾರ್ಥಿವ ಶರೀರ: ಬೆಂಗಳೂರಿನ ಭಕ್ತರ ಮನೆಯಲ್ಲಿ ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರ ಮಧ್ಯಾಹ್ನ 4 ಗಂಟೆಯಲ್ಲಿ ಮಠಕ್ಕೆ ತರಲಾಯಿತು.

ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ಬಂದ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಮದ್ದೂರು, ಮಂಡ್ಯ, ಪಾಂಡವ ಪುರ ಪಟ್ಟಣ, ಚಾಗಶೆಟ್ಟಹಳ್ಳಿ, ಬೇಬಿ, ಚಿನಕುರಳಿ ಗ್ರಾಮದಲ್ಲಿ ಭಕ್ತರು, ಸ್ವಾಮೀಜಿ ಗಳ ಅಂತಿಮ ದರ್ಶನ ಪಡೆದರು. ಮಂಡ್ಯ ದಿಂದಲೇ ಜಿಪಂ ಸದಸ್ಯ ಸಿ.ಅಶೋಕ್ ಅವರ ಪಾರ್ಥಿವ ಶರೀರದ ಜೊತೆಯಲ್ಲಿ ಆಗಮಿಸಿದರು. ಪಾಂಡವಪುರ ಪಟ್ಟಣಕ್ಕೆ ಆಗಮಿಸಿದ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಲಾಯಿತು. ಉಪವಿಭಾಗಾಧಿಕಾರಿ ಆರ್.ಯಶೋದ, ತಹಶೀಲ್ದಾರ್ ಡಿ.ಹನು ಮಂತರಾಯಪ್ಪ, ಉಪತಹಶೀಲ್ದಾರ್ ಸುಧಾಕರ್ ಅವರು ಅಂತಿಮ ದರ್ಶನ ಪಡೆದರು.

ಪಾಂಡವಪುರದಿಂದ ಬೇಬಿ ಗ್ರಾಮದ ದುರ್ದಂಡೇಶ್ವರ ಮಠದಲ್ಲಿ ಭಕ್ತರಿಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಯಿತು. ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ತ್ರಿನೇತ್ರಮಹಂತ ಸ್ವಾಮೀಜಿ, ಗ್ರಾಮಸ್ಥರು ಹಾಗೂ ಶಾಲಾಮಕ್ಕಳು ಸ್ವಾಮೀಜಿಯ ಅಂತಿಮ ದರ್ಶನ ಪಡೆದರು.

ಈ ವೇಳೆ ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಯಾದ ಸಿದ್ದಲಿಂಗ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರಮಹಂತ ಸ್ವಾಮೀಜಿ, ಮಡಕೇರಿಯ ಮಠದ ಹಿಮ್ಮಡಿ ಶಿವಲಿಂಗ ಸ್ವಾಮೀಜಿ, ತಾಪಂ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷ ಎಚ್.ಎಂ.ರಾಮಕೃಷ್ಣ, ಸದಸ್ಯರಾದ ಅಲ್ಪಳಿಗೋವಿಂದಯ್ಯ, ಗಾಯಿತ್ರಿ, ಗೋಪಾಲಗೌಡ, ಶಿವಣ್ಣ, ಲಾರಿ ಮಾಲೀ ಕರ ಸಂಘದ ಅಧ್ಯಕ್ಷ ಸಿ.ಶಿವಕುಮಾರ್, ಸುನೀತ ಪುಟ್ಟಣ್ಣಯ್ಯ, ವಿಎಸ್‍ಎಸ್ ಎನ್‍ಬಿ ಅಧ್ಯಕ್ಷ ಕೆ.ಎಸ್.ಜಯರಾಮು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಸ್.ಮಂಜುನಾಥ್, ವೀರಶೈವ ವಿವಿ ಧ್ದೋದೇಶ ಸಹಕಾರ ಸಂಘದ ಅಧ್ಯಕ್ಷ ಲಿಂಗಪ್ಪ, ಉಪಾಧ್ಯಕ್ಷ ಅಮೃತಿರಾಜ ಶೇಖರ್, ಮುಖಂಡರಾದ ಮಂಜುಳಾ, ಎಸ್.ಎ.ಮಲ್ಲೇಶ್, ಷಡಾಕ್ಷರಪ್ಪ, ಟಿ.ಪಿ. ಶಿವಕುಮಾರ್, ರಾಜ್‍ಕುಮಾರ್, ಎಂ.ಮಂಜುನಾಥ್, ವಕೀಲ ಗುರುಪ್ರಸಾದ್, ಸಿದ್ದಲಿಂಗದೇವರು ಸೇರಿದಂತೆ ಹಲವು ಗಣ್ಯರು, ಸಮುದಾಯದ ಮುಖಂಡರು, ಅಪಾರ ಭಕ್ತರು ಅಂತಿಮ ದರ್ಶನಪಡೆದರು.

ಗಣ್ಯರ ಸಂತಾಪ: ‘ಸದಾಶಿವ ಸ್ವಾಮಿಜಿ ಅವರ ನಿಧನ ತುಂಬಲಾರದ ನಷ್ಟ ಉಂಟು ಮಾಡಿದೆ’ ಎಂದು ಸಚಿವ ಸಿ.ಎಸ್. ಪುಟ್ಟರಾಜು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ವಕೀಲ ಎಂ.ಗುರು ಪ್ರಸಾದ್, ಅರುಣೋದಯ ಟ್ರಸ್ಟ್ ಅಧ್ಯಕ್ಷೆ ಬಿ.ಕೆ.ಅರುಣಜ್ಯೋತಿ, ಜೆಡಿಎಸ್ ಮುಖಂಡ ಬೆಳ್ಳಾಳೆ ಮಲ್ಲೇಶ್, ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಮುಖಂಡರಾದ ಪುರ ದೇವಣ್ಣ, ಮಲ್ಲಿ ಕಾರ್ಜುನಯ್ಯ, ಸುನೀತಾ, ಎಂ.ಶಿವಕುಮಾರ್, ಮಂಜುನಾಥ್, ಪ್ರಕಾಶ್, ರಾಮೇಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದರು.

Translate »