ಕೆ.ಆರ್.ಪೇಟೆ,ಫೆ.28(ಶ್ರೀನಿವಾಸ್): ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ `ಜೈ ಮಹಾರಾಷ್ಟ್ರ, ಜೈ ಶಿವಾಜಿ, ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ಅಧ್ಯಕ್ಷ ಕೆ.ಎಸ್.ಕುಮಾರ್ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಚಿವ ನಾರಾಯಣಗೌಡ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಮುಂಬೈಗೆ ಹೋಗಿ ನಂತರ ಕನ್ನಡನಾಡಿಗೆ ವಾಪಸ್ ಬಂದು ಮೂರು ಭಾರಿ ಶಾಸಕರಾಗಿ, ಈಗ ಸಚಿವರಾಗಿದ್ದರೂ ಸಹ ಕನ್ನಡ ನಾಡು, ನುಡಿ, ನೆಲ-ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳದೇ ಮಂಡ್ಯದ ನೆಲದಲ್ಲಿ ನಿಂತು ಮಹಾರಾಷ್ಟ್ರ ರಾಜ್ಯಕ್ಕೆ ಜೈ, ಮರಾಠಿಗರಿಗೆ ಜೈ ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರಿಗೆ ಅಪಾರವಾಗಿ ಅಪಮಾನ ಮಾಡಿದ್ದಾರೆ. ಇದು ಕ್ಷಮಿಸಲಾರದ ತಪ್ಪಾಗಿದೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಜಯಕರ್ನಾಟಕ ಸಂಘದ ಉಪಾಧ್ಯಕ್ಷ ಬಾವಾಜಿ ಚಂದ್ರು, ಕಾರ್ಯಾಧ್ಯಕ್ಷ ಮಹೇಶ್, ನಗರ ಘಟಕದ ಅಧ್ಯಕ್ಷ ಮದನ್‍ಗೌಡ, ಜಯ ಕರ್ನಾಟಕ ಪ್ರಚಾರ ಸಮಿತಿ ಅಧ್ಯಕ್ಷ ವಿ.ಲೋಕೇಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಧು, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ, ರಾಧಾ, ಗೌರಮ್ಮ, ರಾಜಮ್ಮ, ಮುಖಂಡರಾದ ನಯಾಜ್, ಎಚ್.ವಿ.ರಘುಪತಿ, ಹರೀಶ್, ಶ್ರೀಧರ್, ಗಜ, ರೋಹಿತ್, ಮಾಣಿಕ್ಯ, ಪುನೀತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಕೀಲರಿಂದ ಕಲಾಪ ಬಹಿಷ್ಕಾರ: ಸಚಿವ ನಾರಾಯಣಗೌಡರು ಮಹಾರಾಷ್ಟ್ರ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ತಾಲೂಕಿನ ವಕೀಲರ ಸಂಘದ ಸದಸ್ಯರು ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್.ಇಂದ್ರಕುಮಾರ್, ಖಜಾಂಚಿ ಬಿ.ಕೆ.ಯೋಗೇಶ್, ಜಂಟಿ ಕಾರ್ಯದರ್ಶಿ ಅನ್ವೇಶ್, ಪ್ರಭಾಕರ್, ಕೆರೆಮೇಗಳಕೊಪ್ಪಲು ಶಂಕರೇಗೌಡ, ಜಗದೀಶ್, ನವೀನ್‍ಕುಮಾರ್ ಮತ್ತಿತರರಿದ್ದರು.