ಮಳವಳ್ಳಿ, ಫೆ.28-ಕ್ಷುಲ್ಲಕ ಕಾರಣಕ್ಕಾಗಿ ಪತಿರಾಯನೋರ್ವ ಬೆಂಕಿ ಹಚ್ಚಿ ಪತ್ನಿಯನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಬೆಳಕವಾಡಿ ಗ್ರಾಮದಿಂದ ತಡವಾಗಿ ವರದಿಯಾಗಿದೆ.
ಗ್ರಾಮದ ಮಹದೇವ ಸ್ವಾಮಿ ಎಂಬಾತನೇ ಪತ್ನಿ ಗೀತಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದವನಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ.
ವಿವರ: ಮಹದೇವಸ್ವಾಮಿ ಮತ್ತು ಗೀತಾ ಅವರಿಗೆ ಕಳೆದ 14 ವರ್ಷದ ಹಿಂದೆ ಮದುವೆಯಾಗಿತ್ತು. ಇತ್ತೀಚೆಗೆ ಮಹದೇವ ಸ್ವಾಮಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದನೆನ್ನಲಾಗಿದ್ದು, ಈ ವಿಷಯವಾಗಿ ದಂಪತಿ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಶಿವರಾತ್ರಿ ಹಬ್ಬದ ದಿನ (ಫೆ.21) ಅಡುಗೆ ವಿಚಾರವಾಗಿ ಇವರಿಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಮಹದೇವಸ್ವಾಮಿ ಪತ್ನಿ ಗೀತಾ ಮೇಲೆ ಸೀಮೆಎಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಜ್ವಾಲೆಯಿಂದ ಆತಂಕಗೊಂಡ ಆತನೇ ನೀರು ಸುರಿದು ಬೆಂಕಿ ನಂದಿಸಿದ್ದಾನೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೂ ಸೇರಿಸದೇ ಮನೆಯಲ್ಲೇ ಮಲಗಿಸಿ ದ್ದಲ್ಲದೆ, `ಯಾರಾದರೂ ಕೇಳಿದರೆ ಕುಕ್ಕರ್ ಸಿಡಿದು ಗಾಯವಾಗಿದೆ ಎಂದು ಹೇಳಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮರು ದಿನ ಗೀತಾ ಅವರ ನರಳಾಟ ನೋಡಿದ ಗ್ರಾಮಸ್ಥರು ಆಕೆಯ ತವರು ಮನೆಯವರಿಗೆ ವಿಷಯ ತಿಳಿಸಲಾಗಿ ಅವರು ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ಮೆಮೋ ಆಧರಿಸಿ ಫೆ.24ರಂದು ಬೆಂಗಳೂರಿಗೆ ತೆರಳಿದ ಬೆಳಕವಾಡಿ ಠಾಣೆ ಪೊಲೀಸರು ಗೀತಾ ನೀಡಿದ ಹೇಳಿಕೆಯ ಮೇರೆಗೆ ಪತಿ ಮಹದೇವಸ್ವಾಮಿ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಯತ್ನ ಪ್ರಕರಣ ದಾಖಲಿಸಿಕೊಂಡು, ಪರಾರಿಯಾ ಗಿರುವ ಮಹದೇವಸ್ವಾಮಿ ಹುಡುಕಾಟದಲ್ಲಿ ತೊಡಗಿದ್ದಾರೆ.