ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ
ಕೊಡಗು

ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ

March 27, 2020

ಕೊಡಗು, ಮಾ.27: ಕೊಡಗು ಜಿಲ್ಲೆಯಲ್ಲಿ ದಿನಾಂಕ 22.03.2020ರ ಮಧ್ಯ ರಾತ್ರಿಯಿಂದ ದಿನಾಂಕ 14.04.2020ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಾರ್ವಜನಿಕರು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6:00 ರಿಂದ ಅಪರಾಹ್ನ 12:00 ಗಂಟೆಯವರೆಗೆ ಸಮಯವನ್ನು ಈ ಹಿಂದೆ ನಿಗಧಿಗೊಳಿಸಲಾಗಿತ್ತು.

ಮುಂದುವರೆದು, ಜಿಲ್ಲೆಗೆ ಹೊಂದಿಕೊಂಡಂತೆ ಇರುವ ನೆರೆಯ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಬೇಕಾದ ಕಾರಣ ದಿನಾಂಕ 27.03.2020ರಂದು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಾರ್ವಜನಿಕರು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಈ ಕೆಳಕಂಡಂತೆ ಸಮಯವನ್ನು ನಿಗಧಿಪಡಿಸಲಾಗಿದೆ.

1. ಬೆಳಗ್ಗೆ 6:00 ಗಂಟೆಯಿಂದ 8:00 ಗಂಟೆಯವರೆಗೆ ಹಾಲು, ದಿನಪತ್ರಿಕೆಗಳನ್ನು ಮಾತ್ರ ಖರೀದಿಸಲು ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆಯನ್ನು ತೆರೆಯಲು ವರ್ತಕರಿಗೆ ಸಮಯ ನಿಗಧಿಪಡಿಸಿದೆ.

2. ವಾರದ 3 ದಿನಗಳಲ್ಲಿ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಮಾತ್ರ ಬೆಳಗ್ಗೆ 6:00 ರಿಂದ 10:00 ಗಂಟೆಯವರೆಗೆ ಮಾತ್ರ ಆಹಾರ, ದಿನಸಿ, ತರಕಾರಿ, ಹಣ್ಣುಹಂಪಲುಗಳ ಖರೀದಿಗೆ ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆಯನ್ನು ತೆರೆಯಲು ವರ್ತಕರಿಗೆ ಸಮಯ ನಿಗಧಿಪಡಿಸಿದೆ.

3. ಎಲ್ಲಾ ರೀತಿಯ ಮೀನು ಮತ್ತು ಮಾಂಸದ ಮಾರಾಟ ನಿಷೇಧಿಸಿದೆ.

4. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮಾತ್ರ ಆಗಮಿಸುವುದು.

5. ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳುವುದು.

6. ಆಸ್ಪತ್ರೆ, ಕ್ಲಿನಿಕ್, ಫಾರ್ಮಸಿ, ಆಪ್ಟಿಕಲ್ ಸ್ಟೋರ್, ಡಯಾಗ್ನೋಸ್ಟಿಕ್ ಸೆಂಟರ್ ಒಳಗೊಂಡಂತೆ ಇತರೆ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಅಂಗಡಿ ಮಳಿಗೆಗಳು, ಗೋಡೌನ್, ಕಾರ್ಖಾನೆಗಳು ದಿನದ 24 ಗಂಟೆಗಳು ಕಾರ್ಯಾಚರಿಸಲು ವಿನಾಯಿತಿ ಇರುತ್ತದೆ.

7. ದಿನಾಂಕ 14.04.2020ರ ವರೆಗೆ ದಿನದ 24 ಗಂಟೆಗಳಲ್ಲಿಯೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ವಿನಾ ಕಾರಣ ತಿರುಗಾಡುವುದು, ಗುಂಪುಗೂಡುವುದು ಮುಂತಾದವುಗಳನ್ನು ನಡೆಸತಕ್ಕದ್ದಲ್ಲ.

ಸಾರ್ವಜನಿಕ ಹಿತಾಸಕ್ತಿಯಿಂದ ಮೇಲ್ಕಂಡಂತೆ ಸಮಯವನ್ನು ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

Translate »