ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ಧರ್ಮಪ್ಪ ಅವರ ಮಗ ರಘುನಂದ (35), ನಿಲುವಾಗಿಲು ಗ್ರಾಮದ ಸದಾಶಿವ ಅವರ ಮಗ ಪ್ರಶಾಂತ್ (30) ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ವಾಸು ಅವರ ಮಗ ಪ್ರದೀಪ್ (29) ಬಂಧಿತರು. ಅವರಿಂದ 8 ಮೊಬೈಲ್ ಫೋನುಗಳು ಹಾಗೂ 10,500 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಘುನಂದನ ವಿರುದ್ಧ ಲಷ್ಕರ್ ಠಾಣೆಯಲ್ಲಿ ಪಿಂಪ್ ಕೇಸ್ ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಗೆ ಬಂದು ಮತ್ತೆ ಅದೇ ಚಾಳಿ ಮುಂದುವರೆಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೈಸೂರಿನ ವಿಜಯನಗರ 4ನೇ ಹಂತ, 2ನೇ ಫೇಸ್‍ನ ಮರಿಮಲ್ಲಪ್ಪ ಕಾಂಪೌಂಡ್ ಬಳಿಯ 4102ರ ಸಂಖ್ಯೆಯ ಮನೆಯಲ್ಲಿ ಮಹಿಳೆಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ 8.30 ಗಂಟೆ ವೇಳೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಇನ್ಸ್‍ಪೆಕ್ಟರ್ ಸಿ. ಕಿರಣ್‍ಕುಮಾರ್, ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್, ಸಿಬ್ಬಂದಿಗಳಾದ ಅಲೆಕ್ಸಾಂಡರ್, ಅಸ್ಗರ್ ಖಾನ್, ರಾಮಸ್ವಾಮಿ, ಶಿವರಾಜು, ಎಂ.ಆರ್. ಗಣೇಶ್, ಚಿಕ್ಕಣ್ಣ, ಚಾಮುಂಡಮ್ಮ ಹಾಗೂ ಗೌತಮ್ ಪಾಲ್ಗೊಂಡಿದ್ದರು.