ಶ್ರೀಕಂಠೇಶ್ವರಸ್ವಾಮಿ ದೇಗುಲ ಆಸ್ತಿ ರಕ್ಷಿಸಿ: ಶಾಸಕರ ಅಧ್ಯಕ್ಷತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಆದೇಶ
ಮೈಸೂರು

ಶ್ರೀಕಂಠೇಶ್ವರಸ್ವಾಮಿ ದೇಗುಲ ಆಸ್ತಿ ರಕ್ಷಿಸಿ: ಶಾಸಕರ ಅಧ್ಯಕ್ಷತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಆದೇಶ

January 11, 2020

ನಂಜನಗೂಡು, ಜ.10-ನಗರಸಭೆ ಹಾಗೂ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸುತ್ತಲಿನ ಒತ್ತುವರಿ ತೆರವುಗೊಳಿಸಿ, ದೇವಸ್ಥಾನಕ್ಕೆ ಸೇರಿದ ಸ್ಥಿರಾಸ್ತಿಗಳ ರಕ್ಷಣೆಗೆÉ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಅಭಿರಾವ್ ಜಿ.ಶಂಕರ್ ಆದೇಶಿಸಿದರು.

ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ಬಿ.ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ದೇವಾಲಯದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಭಕ್ತರು ನೀಡಿದ ಕಾಣಿಕೆಯ ಹಣದಲ್ಲೇ ದೇವಾಲಯವನ್ನು ಅಭಿವೃದ್ಧಿಪಡಿಸಲು ಮುಂದಾದರೂ ಕೇಂದ್ರ ಪುರಾತತ್ವ ಇಲಾಖೆಯಿಂದ ಅಡ್ಡಿ ಉಂಟಾಗುತ್ತಿದೆ ಎಂದು ವಿಷಾದಿಸಿದರು.

ದೇವಾಲಯದ ಆಸ್ತಿಗಳ ರಕ್ಷಣೆಯಾಗಬೇಕು. ದೇವಾಲಯದ ಹೊರವಲಯದಲ್ಲಿ ಕಾಂಪೌಂಡ್ ನಿರ್ಮಾಣವಾಗಬೇಕು. ದೇಗುಲ ಕಮಾನು ಕಾಮಗಾರಿ ಅರ್ಧಕ್ಕೆ ನಿಂತಿದೆ. ಸ್ನಾನ ಘಟ್ಟದ ಕಾಮಗಾರಿ ಕುಂಟುತ್ತಾ ಸಾಗಿದೆ. ಕಪಿಲಾ ನದಿಯ ಕಲುಷಿತ ನೀರಿನಲ್ಲೇ ಭಗವಂತನಿಗೆ ಅಭಿಷೇಕ, ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ದೇವಾಲಯದ ಒಳ ಭಾಗದಲ್ಲಿ ಬಾವಿ ನಿರ್ಮಾಣವಾಗಬೇಕು. ಭಕ್ತರ ಅನುಕೂಲಕ್ಕಾಗಿ ಅಂದಾಜು 100 ಕೊಠಡಿಗಳ ನಿರ್ಮಾಣ ಸೇರಿದಂತೆ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದ್ದು, ಈಗಾಗಲೇ ನೀಲ ನಕ್ಷೆ ಸಿದ್ಧವಾಗಿದೆ. ಆದರೆ ಈ ಎಲ್ಲಾ ಕಾಮಗಾರಿಗಳಿಗೂ ಅಡ್ಡಿಪಡಿಸುವುದೇ ಪುರಾತತ್ವ ಇಲಾಖೆಯ ಕಾಯಕವಾಗಿದೆ ಎಂದು ಹರ್ಷವರ್ಧನ್ ಹರಿಹಾಯ್ದರು. ದೇವಾಲಯದಲ್ಲಿ 1,800 ಕೆ.ಜಿ ಬೆಳ್ಳಿ ಸಂಗ್ರಹವಿದ್ದು, ಬೆಳ್ಳಿ ರಥ ನಿರ್ಮಿಸಬೇಕೆಂಬುದು ಭಕ್ತರ ಬಯಕೆ ಎಂದು ತಿಳಿಸಿದರು.

ಅರ್ಚಕರನ್ನು ಹೊರತು ಪಡಿಸಿ ಇತರೆ ನೌಕರರಿಗೆ ಸಮವಸ್ತ್ರ ಧರಿಸಿ ಕರ್ತವ್ಯ ಪಾಲನೆ ಮಾಡುವಂತೆ ಹಾಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಿದರು.

ಸಭೆ ನಂತರ ಜಿಲ್ಲಾಧಿಕಾರಿಗಳು ಪುರಾತತ್ವ ಇಲಾಖೆ ಅಧಿಕಾರಿಗಳೊಡಗೂಡಿ ದೇವಸ್ಧಾನದ ಒತ್ತುವರಿ ಪ್ರದೇಶ ಎಂದು ಗುರುತಿಸಲಾದ ಬೈಪಾಸ್ ರಸ್ತೆಯ ಖಾಸಗಿ ವಸತಿ ಗೃಹವೊಂದರ ಸಮೀಪ ಸ್ಥಳ ಪರಿಶೀಲಿಸಿದರು. ಶ್ರೀಕಂಠೇಶ್ವರಸ್ವಾಮಿ ದೇಗುಲದ ಸುತ್ತಲಿನ ಪ್ರದೇಶದ ಅನಧಿಕೃತ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳವಂತೆ ಕೇಂದ್ರೀಯ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒತ್ತುವರಿ ತೆರವಿಗಾಗಿ ಪುರಾತತ್ವ ಇಲಾಖೆಯಿಂದ ನಿಯಮಾನುಸಾರ ಪ್ರಸ್ತಾವನೆ ಕಳುಹಿಸಿದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವಿಗೆ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ತಹಸಿಲ್ದಾರ್ ಮಹೇಶ್ ಕುಮಾರ್, ಮುಜರಾಯಿ ತಹಸಿಲ್ದಾರ್ ಯತಿರಾಜ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವನಂಜಯ್ಯ, ಸದಸ್ಯರಾದ ಎನ್.ಟಿ.ಗಿರೀಶ್, ಇಂಧನ್‍ಬಾಬು, ಪುಟ್ಟನಿಂಗಶೆಟ್ಟಿ, ಶಶಿರೇಖಾ, ನಗರಸಭೆ ಪೌರಾಯುಕ್ತ ಕರಿಬಸವಯ್ಯ, ದೇವಸ್ಥಾನದ ಇಓ ಶಿವಕುಮಾರ್ ಮುಂತಾದವರಿದ್ದರು.

Translate »