ವೃದ್ಧ ದಂಪತಿ ಸೇರಿ ಮೂವರ ರಕ್ಷಣೆ
ಕೊಡಗು

ವೃದ್ಧ ದಂಪತಿ ಸೇರಿ ಮೂವರ ರಕ್ಷಣೆ

August 24, 2018

ಮಡಿಕೇರಿ:  ಮಹಾ ಮಳೆಯಿಂದ ಸಂತ್ರಸ್ಥರಾದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಗುರುವಾರವೂ ಮುಂದು ವರೆದಿದ್ದು, ಲೈನ್‍ಮನೆಯೊಂದರಲ್ಲಿ ಸಿಲು ಕಿದ್ದ ವೃದ್ಧ ದಂಪತಿಗಳನ್ನು ಎನ್‍ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಹೆಮ್ಮೆತ್ತಾಳು ಸಮೀಪದ ಕಾಂಡನಕೊಲ್ಲಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕವಿಲ್ಲದೆ ತೋಟದ ಲೈನ್ ಮನೆಯಲ್ಲಿ ಪಳನಿ ಮತ್ತು ಶಾಂತ ದಂಪತಿಗಳು ಕಳೆದು 4 ದಿನಗಳಿಂದ ಸಿಲುಕಿಕೊಂಡ್ಡಿದ್ದರು.

ಮೊಬೈಲ್ ಸಂಪರ್ಕ ವ್ಯವಸ್ಥೆಯಿಲ್ಲದ್ದರಿಂದಾಗಿ ಈ ವೃದ್ಧ ದಂಪತಿಗಳಿಗೆ ಯಾರನ್ನೂ ಸಂಪರ್ಕಸಲು ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೆ ತೀವ್ರ ಅನಾರೋಗ್ಯ ಮತ್ತು ಹಸಿವಿನಿಂದ ಬಳಲಿದ್ದ ವೃದ್ಧ ದಂಪತಿಗಳು ಬದುಕುವ ಆಸೆಯನ್ನೇ ಕೈ ಬಿಟ್ಟಿದ್ದರು. ಸ್ಥಳೀಯ ಗ್ರಾಮಸ್ಥರು ಈ ದಂಪತಿಗಳು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರಬ ಹುದೆಂದು ಭಾವಿಸಿದ್ದರು. ಆದರೆ, ಯಾವುದೇ ಕೇಂದ್ರಗಳಲ್ಲೂ ಈ ದಂಪತಿಗಳು ಇಲ್ಲದಿರುವುದನ್ನು ಗಮನಿಸಿದ ಯುವಕರ ತಂಡ, ತೋಟದ ಲೈನ್ ಮನೆಯಲ್ಲಿ ದಂಪತಿಗಳು ಸಿಲುಕಿಕೊಂಡಿರುವುದನ್ನು ಪತ್ತೆ ಹಚ್ಚಿದೆ. ಬಳಿಕ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಮಕ್ಕಂದೂರು ಮೇಘತ್ತಾಳುವಿನ ಮೂಲಕ ಕಾಂಡಕೊಲ್ಲಿ ತಲುಪಿದ ಎನ್‍ಡಿಆರ್‍ಎಫ್, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳೀಯ ಯುವಕ ನೇತೃತ್ವದಲ್ಲಿ ಲೈನ್ ಮನೆಯಲ್ಲಿ ಸಿಲುಕಿದ್ದ ದಂಪತಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಪತಿಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶತಾಯುಷಿ ಮಹಿಳೆ ರಕ್ಷಣೆ: ಮುಕ್ಕೋಡ್ಲುವಿನ ಮನೆಯೊಂದರಲ್ಲಿ ಒಬ್ಬಂಟಿಯಾಗಿ ಬಳಲುತ್ತಿದ್ದ 103 ವರ್ಷದ ಕಾವೇರಮ್ಮ ಎಂಬ ಶತಾಯುಷಿ ಮಹಿಳೆಯನ್ನು ಇಂದು ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಪಡೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ.
ಈ ಪ್ರದೇಶದಲ್ಲಿ ಪ್ರವಾಹದಿಂದ ಭೂ ಕುಸಿತ ಉಂಟಾದಾಗ ಅನಾರೋಗ್ಯದಿಂದಿದ್ದು, ನಡೆಯಲು ಶಕ್ತರಲ್ಲದಿರುವ ಕಾವೇರಮ್ಮ ಅವರನ್ನು ಮನೆಯಲ್ಲೇ ಬಿಟ್ಟು ಎಲ್ಲರೂ ನಿರಾಶ್ರಿತರ ಕೇಂದ್ರ ತಲುಪಿದ್ದರು. ಮನೆಯೂ ಕೂಡ ನೀರಿನಲ್ಲಿ ಒದ್ದೆಯಾಗಿ ಕುಸಿಯುವ ಹಂತ ತಲುಪಿತ್ತು. ಪ್ರವಾಹ ತಗ್ಗಿದ ನಂತರ ಅವರ ಸೊಸೆ ಪ್ರತೀ ದಿನ ಬಂದು ಆಹಾರ ಕೊಟ್ಟು ಹೋಗುತ್ತಿದ್ದರು ಎನ್ನಲಾಗಿದೆ.

ಈ ವೃದ್ಧೆಯ ಚಿಂತಾಜನಕ ಸ್ಥಿತಿಯನ್ನು ಗಮನಿಸಿದ ಸ್ಥಳೀಯ ಯುವಕರು ಇಂದು ರಕ್ಷಣಾ ಪಡೆಗೂ ಮಾಹಿತಿ ನೀಡಿ ವೃದ್ಧೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

Translate »