ವಾರ್ಡ್ ನಂ.55ರಲ್ಲಿ ಬಿಜೆಪಿಗೆ ಬಂಡಾಯ ಬಿಸಿ
ಮೈಸೂರು

ವಾರ್ಡ್ ನಂ.55ರಲ್ಲಿ ಬಿಜೆಪಿಗೆ ಬಂಡಾಯ ಬಿಸಿ

August 24, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ಕಾವು ರಂಗೇರುತ್ತಿದ್ದು, ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ 55ನೇ ವಾರ್ಡಿನಲ್ಲಿ ಬಿಜೆಪಿಗೆ ಬಂಡಾಯದ ಬೀಸಿ ತಲೆ ನೋವಾಗಿ ಪರಿಣಮಿಸಿದೆ.

55ನೇ ವಾರ್ಡಿನ (ಚಾಮುಂಡಿಪುರಂ) ಬಿಜೆಪಿ ಆಕಾಂಕ್ಷಿಯಾಗಿದ್ದ ಮ.ವಿ.ರಾಮ್‍ಪ್ರಸಾದ್ ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕಡೇ ದಿನವಾದ ಇಂದು ಕಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದ ಪಕ್ಷದ ವರಿಷ್ಠರಿಗೆ ನಿರಾಸೆ ಮೂಡಿಸಿದ್ದಾರೆ. ವಾರ್ಡಿನ ಜನತೆ ಹಾಗೂ ಹಿತೈಷಿಗಳ ಒತ್ತಡಕ್ಕೆ ಮಣಿದು ಸ್ವತಂತ್ರವಾಗಿ ಸ್ಪರ್ಧೆಗೆ ಧುಮುಕಿದ್ದು, ಇದು 55ನೇ ವಾರ್ಡಿನಲ್ಲಿ ಬಿಜೆಪಿಗೆ ಬಂಡಾಯದ ಬೀಸಿ ತಟ್ಟಲಿದೆ.

ಪುನರ್ ವಿಂಗಡಣೆ ಬಳಿಕ 55ನೇ ವಾರ್ಡ್ ರಚನೆಯಾಗಿದ್ದು, ಇದಕ್ಕೂ ಮುನ್ನ ಇದು 6ನೇ ವಾರ್ಡ್ ಆಗಿತ್ತು. ಕಳೆದ ಅವಧಿಗೆ ಈ ಹಳೇ ವಾರ್ಡಿನ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ಮ.ವಿ.ರಾಮ್‍ಪ್ರಸಾದ್, ಮತ್ತೆ ತಮಗೇ ಪಕ್ಷದ ಟಿಕೆಟ್ ದೊರೆಯುವ ವಿಶ್ವಾಸ ಹೊಂದಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅವರ ಕೈತಪ್ಪಿದ ಟಿಕೆಟ್ ಎಸ್.ಪುರುಷೋತ್ತಮ್ ಅವರ ಪಾಲಾಯಿತು.

ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಸೋಮವಾರ ವಲಯ ಕಚೇರಿ-1ರಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರಾಮ್‍ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ಬಳಿಕ ಕಣದಿಂದ ಹಿಂದೆ ಸರಿಯಲು ಪಕ್ಷದ ವರಿಷ್ಠರು ನಡೆಸಿದ ಪ್ರಯತ್ನ ಕೊನೆಗೂ ವಿಫಲವಾಗಿದ್ದು, ಕಣದಲ್ಲಿ ಉಳಿಯುವ ನಿರ್ಧಾರಕ್ಕೆ ಮ.ವಿ.ರಾಮ್‍ಪ್ರಸಾಸ್ ಬಂದಿದ್ದಾರೆ.

ಮೂಲ ಕಾಂಗ್ರೆಸ್ಸಿಗರಾದ ಎಂ.ಸಿ.ಚಿಕ್ಕಣ್ಣ ಮೂರು ಬಾರಿ ಪಾಲಿಕೆಗೆ ಆಯ್ಕೆಯಾಗಿರುವ ಅನುಭವಿ ಆಗಿದ್ದಾರೆ. ಈ ಹಿಂದೆ ಇದ್ದಂತಹ ವಾರ್ಡ್ 3, ವಾರ್ಡ್ 5 ಹಾಗೂ ವಾರ್ಡ್ 9ರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಬಿಜೆಪಿಗೆ ಜಿಗಿದ್ದ ಚಿಕ್ಕಣ್ಣ ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದು, ಇದೀಗ 55ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಪಾಲಿಕೆ ಚುನಾವಣೆಯ ಕಿರಿಯ ಅಭ್ಯರ್ಥಿ ಎನ್ನಲಾಗಿರುವ ಅಜಯ್‍ಕುಮಾರ್‍ಶಾಸ್ತ್ರಿ 55ನೇ ವಾರ್ಡಿನಲ್ಲಿ ಜೆಡಿಎಸ್ ಟಿಕೆಟ್ ಗಿಟ್ಟಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಈ ವಾರ್ಡ್‍ನಲ್ಲಿ (ಹಳೆ ವಾರ್ಡ್ 6) ಕಳೆದ ಅವಧಿಯಲ್ಲಿ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ಮ.ವಿ.ರಾಮ್‍ಪ್ರಸಾದ್ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರೆ, ಎಸ್.ಪುರುಷೋತ್ತಮ್ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ವಾರ್ಡ್ ಸಂಖ್ಯೆ : 55
ವಾರ್ಡ್ ಹೆಸರು : ಚಾಮುಂಡಿಪುರಂ
ಮೀಸಲಾತಿ : ಸಾಮಾನ್ಯ
ಮತದಾರರ ಸಂಖ್ಯೆ : 14,498

Translate »