ಕುಶಾಲನಗರ: ಸಮೀಪದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಹಾರಂಗಿ ನದಿ ದಂಡೆಯಲ್ಲಿ ವಾಸವಿರುವ ಅನೇಕ ಕುಟುಂಬಗಳು ಕಳೆದ ಆಗಸ್ಟ್ನಲ್ಲಿ ಸಂಭವಿಸಿದ ನೆರೆ ಪ್ರವಾಹಕ್ಕೆ ಸಿಲುಕಿ ತೀವ್ರ ಹಾನಿ ಉಂಟಾಗಿದ್ದರೂ ಕೂಡ ಇದುವರೆಗೂ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಮಾ.12 ರಂದು ನಾಡಕಚೇರಿ ಮುಂದೆ ಸಂತ್ರಸ್ತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಪಂ ಸದಸ್ಯ ಭಾಸ್ಕರ್ ನಾಯಕ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಿಂದ ಹಾರಂಗಿ ಜಲಾಶಯದ ಸುತ್ತಮುತ್ತ ವಾಸವಿರುವ ಅನೇಕ ಕಟುಂಬಗಳಿಗೆ ಹಾನಿ ಉಂಟಾಗಿತ್ತು. ಆ ಸಂದರ್ಭ ಜಿಲ್ಲಾಧಿಕಾರಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ಆಶ್ರಯ ನೀಡಿದ್ದರು. ಸಂತ್ರಸ್ತ ಕುಟುಂಬಗಳಿಗೆ ತಲಾ 3,800 ರೂ.ಗಳನ್ನು ನೀಡಿದರು. ನಂತರ ಕಂದಾಯ ಅಧಿಕಾರಿಗಳು ನೆರೆ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಕುರಿತು ಪರಿಶೀಲನೆ ನಡೆಸಿ ಜಿಲ್ಲಾಡಳಿ ತಕ್ಕೆ ವರದಿ ಸಲ್ಲಿಸಲಾಗಿದೆ. 22 ಮನೆಗಳು ಪೂರ್ಣ ಹಾನಿ ಹಾಗೂ 52 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ರೂ.50 ಸಾವಿರ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಪರಿಹಾರ ಬಂದಿಲ್ಲ. ಈ ಬಗ್ಗೆ ಕ್ಷೇತ್ರ ಶಾಸಕರಿಗೆ ಹಾಗೂ ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾ ಗಿದೆ. ಆದರೆ ಇದುವರೆಗೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಮುಂದಿನ ಒಂದು ವಾರದೊಳಗೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಭಾಸ್ಕರ್ ಒತ್ತಾಯಿಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯದೆ ಹೋದರೆ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾ ಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.