ಮೈಸೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‍ಐ ಕೋಟಾ ಹಾಗೂ ಶುಲ್ಕ ಹೆಚ್ಚಳದ ಪ್ರಸ್ತಾಪವನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾ ಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಆಶ್ರಯದಲ್ಲಿ ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜು ಗಳಲ್ಲಿ ಎನ್‍ಅರ್‍ಐ ಕೋಟಾ ಜಾರಿಗೆ ತರುವ ಪ್ರಸ್ತಾಪವನ್ನು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವರು ಇತ್ತೀಚೆಗೆ ಸದನದಲ್ಲಿ ಮಂಡಿಸಿದ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೆ.10ರಷ್ಟು ಎನ್‍ಆರ್‍ಐ ಕೋಟಾ ಜಾರಿಗೆ ತಂದಿದ್ದೇ ಆದರೆ ಇದು ಸಂವಿಧಾನ ಬಾಹಿರ ಹಾಗೂ ಸಹಜ ನ್ಯಾಯಕ್ಕೆ ವಿರುದ್ಧವಾದ ನಡೆಯಾಗು ತ್ತದೆ. ಜೊತೆಗೆ ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪಾರೀಕರಣ, ಖಾಸಗೀಕರಣಗೊಳ್ಳಲಿದೆ. ಸೀಟುಗಳು ಕಡಿತವಾಗುತ್ತಾ ಹೋದರೆ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುವಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎನ್‍ಆರ್‍ಐ ಕೋಟಾ ಜಾರಿಗೆ ತರುವ ಹಾಗೂ ವೈದ್ಯಕೀಯ ಸ್ನಾತಕೋತ್ತರ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಖಜಾಂಚಿ ಆಸಿಯಾ ಬೇಗಂ, ಆಕಾಶ್‍ಕುಮಾರ್, ಚಂದ್ರಕಲಾ ಇನ್ನಿತರರಿದ್ದರು.