ಗೋಣಿಕೊಪ್ಪ,ಮಾ.2-ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಬಾಳೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.ಸೆಸ್ಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪಟ್ಟಣ ಬಂದ್, ಪ್ರತಿಭಟನಾ ಮೆರವಣಿಗೆ, ಮಾನವ ಸರಪಳಿ ಮೂಲಕ ಎಚ್ಚರಿಸಿದರು. ಗ್ರಾಮದ ಶ್ರೀರಾಮ ವೃತ್ತದಿಂದ ಮೆರವಣಿಗೆ ಮೂಲಕ ಸೆಸ್ಕ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಸೆಸ್ಕ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಾಳೆಲೆ, ನಿಟ್ಟೂರು, ಕಾರ್ಮಾಡು, ಸುಳುಗೋಡು, ಪೊನ್ನಪ್ಪಸಂತೆ, ಬಿಳೂರು, ರಾಜಾಪುರ ಭಾಗದ ಕೃಷಿಕರು ಭಾಗವಹಿಸಿದರು. ಮುಖ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸ್ಥಳೀಯ ಸೆಸ್ಕ್ ಜೆಇ ಮನು ಅವರ ಅಸಮರ್ಪಕ ಸೇವೆಯಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು ಮಾತನಾಡಿ, ಪೊನ್ನಂಪೇಟೆ ಕೆಪಿಟಿಸಿಎಲ್ ಘಟಕದಿಂದ ಬಾಳೆಲೆ ಮಾರ್ಗಕ್ಕೆ ಅಳವಡಿಸಿರುವ 11 ಕೆ.ವಿ. ವಿದ್ಯುತ್ ಕೇಬಲ್ ಕಳಪೆ ಯಿಂದ ಕೂಡಿದೆ. 1.25 ಕೋಟಿ ಅನುದಾನದ ಈ ಯೋಜನೆ ಕಳಪೆಯಾಗಿರುವುದರಿಂದ ಬಾಳೆಲೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ ಎಂದರು. ಈ ಯೋಜನೆಯ ಸಂಪೂರ್ಣ ತನಿಖೆಯಾಗಬೇಕು. ಇದರಿಂದ ಗ್ರಾಹಕರಿಗೆ ಆಗಿರುವ ನಷ್ಟವನ್ನು ಸರ್ಕಾರ ತನಿಖೆ ಮೂಲಕ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಬಾಳೆಲೆ ಪಟ್ಟಣದ ಅಂಗಡಿ -ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಪ್ರಮುಖರಾದ ಅಳಮೇಂಗಡ ಬೋಸ್ ಮಂದಣ್ಣ, ಆದೇಂಗಡ ವಿನು ಉತ್ತಪ್ಪ, ಮಾಚಂಗಡ ರೋಶನ್, ಸುಕೇಶ್, ಮಲ್ಚೀರ ಬೋಸ್, ಚೆರಿಯಪಂಡ ಕೇಸು, ನವೀನ್, ಅಜಯ್, ನವೀನ್ ಪಾಲ್ಗೊಂಡಿದ್ದರು.