ಬಾರ್ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಬಾರ್ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ

October 23, 2018

ಮಡಿಕೇರಿ: ಇಬ್ಬರು ಕ್ಯಾಂಟೀನ್ ನೌಕರರ ಮೇಲೆ 2 ದಿನಗಳ ಹಿಂದೆ ನಡೆದ ಗುಂಡಿನ ದಾಳಿ ಪ್ರಕರಣ ದಿಂದ ಅಸಮಾಧಾನಗೊಂಡಿರುವ ನಗರದ ಹಿಲ್‍ರಸ್ತೆ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸ್ಥಳೀಯ ಕಾವೇರಿ ಬಾರ್ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪಿಎಫ್‍ಐ ಸಂಘಟನೆ ಮತ್ತು ಸಲಫಿ ಮಸೀದಿಯ ಆಡಳಿತ ಮಂಡಳಿಯ ಪ್ರಮುಖರು ಬಾರ್ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಬಾರ್ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಗುಂಡು ಹಾರಿಸಿದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪಿಎಫ್‍ಐ ಸಂಘಟನೆಯ ಅಧ್ಯಕ್ಷ ಹ್ಯಾರೀಸ್ ಮಾತನಾಡಿ, ಅ.18 ರಂದು ಮಡಿಕೇರಿ ನಗರದ ಎಲ್ಲಾ ಬಾರ್‍ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಕಾವೇರಿ ಬಾರ್‍ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ ಲಾಗಿದೆ. ಕ್ಯಾಂಟೀನ್ ನೌಕರರರಾದ ರಿಯಾಜ್ ಹಾಗೂ ಸಮೀಮ್ ಎಂಬಿಬ್ಬರ ಮೇಲೆ ಲೋಕೇಶ್ ಮತ್ತು ಅಕ್ರಂ ಗುಂಡು ಹಾರಿಸಿ ಕಾಲುಗಳಿಗೆ ಗಾಯಗೊಳಿಸಿದ್ದಾರೆ. ಮದ್ಯ ವ್ಯಸನಿಗಳ ಹಾವಳಿಯಿಂದಾಗಿ ಈ ರಸ್ತೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಧೈರ್ಯದಿಂದ ಓಡಾಡಲಾಗದ ಪರಿಸ್ಥಿತಿ ಉದ್ಭವಿಸಿದೆ ಎಂದು ಆರೋಪಿಸಿದರು.

ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ಬಂದೂಕುಗಳನ್ನು ದುರುಪಯೋಗ ಪಡಿಸಲಾಗುತ್ತಿದ್ದು, ಜಿಲ್ಲಾಡಳಿತ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ದರು. ಬಂದೂಕು ಕಾನೂನು ಮತ್ತು ಹಕ್ಕನ್ನು ಉಲ್ಲಂಘಿಸು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ವರನ್ನು ಕೊಡಗಿನಿಂದಲೇ ಗಡಿಪಾರು ಮಾಡಬೇಕು ಎಂದರು. ನಗರಸಭೆ ಮತ್ತು ಅಬಕಾರಿ ಇಲಾಖೆ ತಕ್ಷಣ ಕಾವೇರಿ ಬಾರ್‍ನ ಲೈಸೆನ್ಸ್‍ನ್ನು ರದ್ದುಗೊಳಿಸಬೇಕು, ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅಮಿನ್ ಮೊಹಿಸಿನ್ ಎಚ್ಚರಿಕೆ ನೀಡಿದರು.
ಸ್ಥಳೀಯ ನಿವಾಸಿ ಜಮುನಾ ಹಾಗೂ ರಾಧಾ ಮಾತ ನಾಡಿ, ಮದ್ಯ ವ್ಯಸನಿಗಳು ಅಸಭ್ಯ ರೀತಿಯಲ್ಲಿ ವರ್ತಿಸು ತ್ತಿದ್ದು, ಮಹಿಳೆಯರು ನೆಮ್ಮದಿಯಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಲಫಿ ಮಸೀದಿ ಅಧ್ಯಕ್ಷ ರಿಯಾಜ್ó, ಮೌಲವಿ ಅನಾಸ್, ನಗರಸಭಾ ಸದಸ್ಯರುಗಳಾದ ಮನ್ಸೂರ್, ಕೆ.ಜಿ.ಪೀಟರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »