ಸಂತೇಮರಹಳ್ಳಿ-ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಸಂತೇಮರಹಳ್ಳಿ-ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

January 2, 2020

ಚಾಮರಾಜನಗರ, ಜ.1- ತೀವ್ರ ಹದಗೆಟ್ಟಿರುವ ಸಂತೇಮರಹಳ್ಳಿ- ಮೂಗೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮಾಜಿ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಸಂತೇಮರಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಸಂತೇಮರಹಳ್ಳಿಯ ಪ್ರವಾಸಿ ಮಂದಿರದಿಂದ ಸಮೀಪದ ವೃತ್ತದ ತನಕ ಮಾಜಿ ಸಂಸದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಂಚಾರ ತಡೆ ನಡೆಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಧ್ರುವನಾರಾಯಣ್ ಮಾತನಾಡಿ, 10 ಕಿ.ಮೀ. ದೂರದ ಸಂತೇಮರಹಳ್ಳಿ-ಮೂಗೂರು ರಸ್ತೆ ವರ್ಷದ ಹಿಂದೆಯೇ ಹದಗೆಟ್ಟಿದ್ದು ಸಂಪೂರ್ಣವಾಗಿ ಹಳ್ಳ ಬಿದ್ದಿದೆ. ದುರಸ್ತಿ ಮಾಡಿಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.

ರಸ್ತೆ ಹಾಳು ಬಿದ್ದಿರುವುದರಿಂದ ವಾಹನಗಳು ಎದ್ದುಬಿದ್ದು ಸಂಚರಿಸುತ್ತಿವೆ. ಪ್ರತಿದಿನ ವಾಹನ ಚಾಲಕರು, ಪ್ರಯಾಣಿಕರು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿ ದ್ದಾರೆ. ಕಳೆದ ಒಂದು ವಾರದ ಹಿಂದೆ ಖಾಸಗಿ ಬಸ್ ಉರುಳಿ 10ಕ್ಕೂ ಹೆಚ್ಚು ಜನರು ಗಾಯಗೊಂಡರು. ಆದರೂ, ರಸ್ತೆ ದುರಸ್ತಿಗೆ ಸಂಬಂಧಿಸಿದವರು ಚಕಾರ ಎತ್ತಿಲ್ಲ ಎಂದು ದೂರಿದರು.

ನಾನು ಸಂಸದನಾಗಿದ್ದಾಗ ರಾಷ್ಟ್ರೀಯ ಹೆದ್ದಾರಿ-209 ಹಾಗೂ ಇತರೆ ಅಭಿವೃದ್ದಿ ಕಾರ್ಯಗಳಿಗೆ 1400 ಕೋಟಿ ರೂ. ಬಿಡುಗಡೆ ಮಾಡಿಸಿದ್ದೆ. ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಅವುಗಳನ್ನು ಪುನರಾಂಭಿಸಲು ಸ್ಥಳೀಯ ಶಾಸಕರು, ಸಂಸದರು ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಕೊಳ್ಳೇಗಾಲ ಕ್ಷೇತ್ರದ ಜನರು ಎನ್.ಮಹೇಶ್ ಅವರಿಗೆ ಒಂದು ಅವಕಾಶ ನೀಡಿದ್ದರು. ಅದನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿಲ್ಲ ಎಂದು ಆರೋಪಿಸಿದರು. ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಎನ್.ಮಹೇಶ್ ಶಾಸಕರಾಗಿ ಒಂದೂವರೆ ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ಜನರಿಗೆ ನಿರಾಸೆಯಾಗಿದೆ. ಶಾಸಕರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ್ ಅವರಿಗೆ ರಸ್ತೆ ದುರಸ್ತಿಗೆ ಆಗ್ರಹಿಸಿದ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು. ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಯೋಗೇಶ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಮುಖಂಡರಾದ ಡಿ.ಪಿ.ಪ್ರಕಾಶ್, ಕಮರವಾಡಿ ರೇವಣ್ಣ, ಮಹದೇವಪ್ರಸಾದ್ ಇತರರು ಪಾಲ್ಗೊಂಡಿದ್ದರು.

Translate »