ಆನೆಮಡು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಆನೆಮಡು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ

January 2, 2020

ಚಾಮರಾಜನಗರ, ಜ.1- ಆನೆಮಡುವಿನ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ಉಡಿಗಾಲ, ವೀರನಪುರ, ಕಡುವಿನಕಟ್ಟೆಹುಂಡಿ ಗ್ರಾಮಸ್ಥರು ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಉಡಿಗಾಲ ಸಮೀಪ ಕೆರೆಗೆ ನೀರು ಹರಿಸುವ ಪೈಪ್‍ಲೈನ್ ಇರುವ ಚಾಮ ರಾಜನಗರ- ಗುಂಡ್ಲುಪೇಟೆ ಮುಖ್ಯರಸ್ತೆ ಯಲ್ಲಿ ಜಮಾಯಿಸಿದ ರೈತರು ಕೆಲಕಾಲ ರಸ್ತೆ ತಡೆ ನಡೆಸಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆ ದಾರರ ಜತೆ ಈಚೆಗೆ ಪೈಪ್‍ಲೈನ್ ಕಾಮ ಗಾರಿ ವೀಕ್ಷಣೆ ಮಾಡಿದ್ದ ಶಾಸಕ ಸಿ.ಪುಟ್ಟ ರಂಗಶೆಟ್ಟಿ ಹೊಸ ವರ್ಷದ ದಿನ ಪೈಪ್‍ಲೈನ್ ಮೂಲಕ ಕೆರೆಗೆ ನೀರು ಹರಿಸಲು ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪ್ರತಿಭಟನಾನಿರತ ರೈತರು ತಿಳಿಸಿದರು.

ಬುಧವಾರ ಬೆಳಗ್ಗೆ 3 ಗ್ರಾಮಗಳ ನೂರಾರು ರೈತರು ಸ್ಥಳದಲ್ಲಿ ಜಮಾಯಿಸಿ ನೀರು ಹರಿದು ಬರುವುದನ್ನು ವೀಕ್ಷಿಸಲು ಸಜ್ಜಾಗಿದ್ದರು. ಆದರೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀರು ಹರಿಸಲು ಮುಂದಾಗದ ಕಾರಣ ಪ್ರತಿಭಟನೆ ನಡೆಸಬೇಕಾಯಿತು ಎಂದು ತಿಳಿಸಿದರು.

ನಿಗಮದ ಅಧಿಕಾರಿಗಳು ನೀರು ಹರಿಸುವ ಸಂಬಂಧ ಮಾತನಾಡಲು ಮುಂದಾ ದರೂ ಶಾಸಕರು ಕರೆಯನ್ನು ಸ್ವೀಕರಿಸಲಿಲ್ಲ. ನೀಡಿದ ಭರವಸೆಯಂತೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಬೇಕಾ ಯಿತು. ನೀರು ಹರಿಸುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.

ರೈತರ ಒತ್ತಾಯಕ್ಕೆ ಮಣಿದ ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ರಂಗರಾಮು, ಎಇಇ ಮಹದೇವನಾಯಕ, ಸಣ್ಣ ನೀರಾವರಿ ಇಲಾಖೆಯ ಎಇಇ ಭಾಸ್ಕರ್, ಸಹಾಯಕ ಇಂಜಿನಿಯರ್ ರಾಜಶೇಖರ್ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸಿದರು.

ಇದೇ ವೇಳೆ ಇಂಜಿನಿಯರ್‍ಗಳು ಸಂಬಂಧಿಸಿದವರಿಗೆ ಸೂಚಿಸಿ ಪೈಪ್‍ಲೈನ್ ಮೂಲಕ ನೀರು ಹರಿಸಿದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು. ಚಾಮರಾಜನಗರ ಗ್ರಾಮಾಂತರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಲತೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜಿಸಲಾಗಿತ್ತು. ಪ್ರತಿಭmನೆ ಯಲ್ಲಿ ಮುಖಂಡರಾದ ಉಡಿಗಾಲನಂಜಪ್ಪ, ಧ್ರುವ, ರೇವಣ್ಣ, ಶಿವು, ನಾಗೇಶ್, ಮಂಜು, ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

Translate »