ಓಲಾ ಅಟ್ಯಾಚ್ಡ್ ವಾಹನ ಚಾಲಕರ ಧರಣಿ ಅಂತ್ಯ
ಮೈಸೂರು

ಓಲಾ ಅಟ್ಯಾಚ್ಡ್ ವಾಹನ ಚಾಲಕರ ಧರಣಿ ಅಂತ್ಯ

September 25, 2018

ಮೈಸೂರು: ಓಲಾ ಕಂಪನಿಯ ಅಧಿಕಾರಿಗಳು ನೀಡಿದ ಸೂಕ್ತ ಭರವಸೆ ಹಿನ್ನೆಲೆಯಲ್ಲಿ ಕಳೆದ 3 ದಿನದಿಂದ ಮೈಸೂರಿನ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿ ಓಲಾ ಕಚೇರಿ ಎದುರು ನಡೆಸುತ್ತಿದ್ದ ಧರಣಿಯನ್ನು ಓಲಾ ಅಟ್ಯಾಚ್ಡ್ ವಾಹನ ಚಾಲಕರು ಮತ್ತು ಮಾಲೀಕರು ಸೋಮವಾರ ಹಿಂಪಡೆದಿದ್ದಾರೆ. ಅಟ್ಯಾಚ್ಡ್ ಮತ್ತು ಲೀಸಿಂಗ್ ವಾಹನಗಳಿಗೆ ಸರಿ ಸಮಾನಾಂತರವಾದ ಬುಕ್ಕಿಂಗ್ ಹಾಗೂ ಒಂದೇ ಆ್ಯಪ್ ಬಳಸಬೇಕು. ಲೀಸ್ ವಾಹನಗಳಿಗೆ ಒಬ್ಬರೇ ಚಾಲಕರನ್ನು ನಿಗದಿ ಮಾಡಬೇಕು. ಇನ್ನು ಮುಂದೆ ಹೊಸದಾಗಿ ಯಾವುದೇ ಲೀಸಿಂಗ್ ವಾಹನಗಳನ್ನು ನೀಡಬಾರದು. ಹಳೇ ಎಂಬಿಜಿ ಪ್ಲಾನ್ ನೀಡಬೇಕು ಹಾಗೂ ಇಂಧನ ದರ ಹೆಚ್ಚಾಗಿರುವುದರಿಂದ ಎಂಬಿಜಿಯಲ್ಲಿ ಹೆಚ್ಚಿನ ದರ ನೀಡಬೇಕು. ಇರುವ ವಾಹನಗಳಿಗೆ ಆಡಿಟಿಂಗ್ ಮತ್ತು ಔಟ್ ಸ್ಟೇಷನ್ ರೆಂಟಲ್ ನೀಡಬೇಕು ಎಂದು ಆಗ್ರಹಿಸಿ ಓಲಾ ಚಾಲಕರು, ಮಾಲೀಕರು ಧರಣಿ ನಡೆಸುತ್ತಿದ್ದರು. ಸೋಮವಾರ ಸ್ಥಳಕ್ಕೆ ಆಗಮಿಸಿದ ಓಲಾ ಕಂಪನಿಯ ಸಹಾಯಕ ವ್ಯವಸ್ಥಾಪಕ ವೇದಾಸ್ ಅವರು, ಈಗಿರುವ ಪ್ಲಾನ್‍ಗೆ ಕಿ.ಮೀ.ಗೆ ರೂ.4 ಹಾಗೂ ಮಿನಿ ವಾಹನಗಳಿಗೆ ರೂ.3 ಹೆಚ್ಚಳ ಮಾಡುವುದಾಗಿಯೂ ಹಾಗೂ ಅಟ್ಯಾಚ್ಡ್ ಹಾಗೂ ಕಂಪನಿ ವಾಹನಗಳಿಗೆ ಸಮಾನ ಬುಕಿಂಗ್ ನೀಡುವುದಾಗಿಯೂ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಿರುವುದಾಗಿ ಅರಮನೆ ನಗರಿ ಸಾರಥಿ ಸೇನೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಂ.ರೋಹಿತ್‍ರಾಜ್ ತಿಳಿಸಿದ್ದಾರೆ.

Translate »