ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಮಂಡ್ಯ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 19, 2018

ಮಂಡ್ಯ: ಎಲ್ಲಾ ವಿದ್ಯಾರ್ಥಿ ಗಳಿಗೂ ಉಚಿತ ಬಸ್‍ಪಾಸ್ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಎಬಿವಿಪಿಯಿಂದ ಪ್ರತಿಭಟನೆ ನಡೆಯಿತು.

ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಆವರಣದಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡ ಆರ್.ಸಂತೋಷ್ ಮಾತ ನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರದ 2018-19ನೇ ಸಾಲಿನ ವಾರ್ಷಿಕ ಬಜೆಟ್‍ನಲ್ಲಿ ಎಸ್‍ಸಿ/ ಎಸ್‍ಟಿ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಆದರೆ, ಇಂದಿನ ರಾಜ್ಯ ಸರ್ಕಾರ ಆ ಯೋಜನೆಯನ್ನು ಜಾರಿಗೊಳಿಸದೆ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದ ಸಾರಿಗೆ ಸಚಿವರು ಉಚಿತ ಬಸ್‍ಪಾಸ್ ನೀಡಲಾಗುವುದಿಲ್ಲ ಎಂದು ಹೇಳಿರುವುದು ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದರಿಂದ ಅವರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತದೆ. ಉಚಿತ ಬಸ್‍ಪಾಸ್ ವಿತರಣೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಗೆ ಹೋಗಲು ಮತ್ತಷ್ಟು ಉತ್ತೇಜಿಸಿದಂತಾಗುತ್ತದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಅವರು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರದ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈಗಾಗಲೇ ಉಚಿತ ಬಸ್‍ಪಾಸ್‍ಗಾಗಿ ರಾಜ್ಯಾ ದ್ಯಂತ ಹೋರಾಟವನ್ನು ನಡೆಸಿ, ರಾಜ್ಯದ ಶಿಕ್ಷಣ, ಹಣಕಾಸು ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ಇಲ್ಲಿಯವರೆಗೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೂರಿದರು.

ತಕ್ಷಣ ರಾಜ್ಯ ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವಿತರಿಸ ಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡ ರಾದ ಪ್ರೀತಿ, ಗಿರೀಶ್, ಲಕ್ಷ್ಮೀ, ರಚಿತಾ, ಮಹೇಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Translate »