ಮೈಸೂರಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

August 14, 2018

ಮೈಸೂರು: ದೆಹಲಿಯ ಜಂತರ್-ಮಂತರ್‍ನಲ್ಲಿ ಸಂವಿಧಾನ ಸುಟ್ಟ ಕಿಡಿಗೇಡಿಗಳ ವಿರುದ್ಧ ಪ್ರಿವೆನ್ಷನ್ ಆಫ್ ನ್ಯಾಷನಲ್ ಹಾನರ್ ಆ್ಯಕ್ಟ್ 1971ರ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ದಲಿತ ಸಂಘಟನೆಗಳು ಮೈಸೂರಿನಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಸಿದವು.
ಮೈಸೂರು ಅಶೋಕಪುರಂ ಆದಿ ಕರ್ನಾಟಕ ಮಹಾಸಂಸ್ಥೆ, ಯುವ ಸಂಘಟನೆಗಳ ಒಕ್ಕೂಟ, ದಲಿತ ಸಂಘಟನೆಗಳು, ದಲಿತ ವಿದ್ಯಾರ್ಥಿಗಳು, ಪ್ರಗತಿಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರಿನ ಅಶೋಕಪುರಂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಶೋಕ ವೃತ್ತ, ಆರ್‍ಟಿಓ ವೃತ್ತ, ಅರಸು ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ದಲಿತ ವಿರೋಧಿಗಳ ವಿರುದ್ಧ ಘೋಷಣೆ ಕೂಗಿದರು. ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿಧಾನದ ಪ್ರತಿಗೆ ಬೆಂಕಿ ಇಟ್ಟು ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿ ದಲಿತ ಸಮುದಾಯ ಹಾಗೂ ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಪ್ರೊ.ಮಹೇಶ್‍ಚಂದ್ರಗುರು, ಮಾಜಿ ಮೇಯರ್ ಪುರುಷೋತ್ತಮ್ ಇನ್ನಿತರರು ಮಾತನಾಡಿ, ಇತ್ತೀಚೆಗೆ ದಲಿತ ಯುವಕರನ್ನು ಹತ್ಯೆ ಮಾಡಲಾಗುತ್ತಿದೆ. ಗೋರಕ್ಷಕರ ಹೆಸರಿನಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆ.9ರಂದು ದೆಹಲಿಯ ಜಂತರ್-ಮಂತರ್‍ನಲ್ಲಿ ಮನುವಾದಿ ಶ್ರೀನಿವಾಸ್ ಪಾಂಡ್ಯ ಗುರೂಜಿ ಹಾಗೂ ಪೀಪಲ್ ಫಾರ್ ಈಕ್ವಾಲಿಟಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಪೊಲೀಸರ ಸಮ್ಮುಖದಲ್ಲಿಯೇ ದೇಶದ ಸರ್ವಶ್ರೇಷ್ಠ ಗ್ರಂಥವಾದ ಸಂವಿಧಾನವನ್ನು ಬಹಿರಂಗವಾಗಿ ಸುಟ್ಟಿದ್ದಾರೆ. ಅಂಬೇಡ್ಕರ್ ಮತ್ತು ಸಂವಿಧಾನದ ವಿರುದ್ಧ ಘೋಷಣೆ ಕೂಗಿದ್ದಾರೆ. ಇವರನ್ನು ತಕ್ಷಣ ಬಂಧಿಸಿ, ದೇಶದ್ರೋಹ ಪ್ರಕರಣ ದಾಖಲಿಸಿ, ದೇಶದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.

 

Translate »