ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

August 4, 2019

ಮೈಸೂರು, ಆ.3(ಪಿಎಂ)- ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೋಮು ದ್ವೇಷ ವ್ಯಾಪಕವಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಆರ್‍ಎಸ್‍ಎಸ್ ಬೆಂಬಲಿತ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಕೋಮುದ್ವೇಷ ವ್ಯಾಪಕವಾಗಿದ್ದು, ದಲಿತರ ಮೇಲಿನ ದೌರ್ಜನ್ಯ ಎಗ್ಗಿಲ್ಲದೆ ಸಾಗಿದೆ ಎಂದು ಆರೋಪಿಸಿದರು. ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಎಂಬಾತ 2 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕ್ರೌರ್ಯ ಮೆರೆದಿದ್ದಾನೆ. ದೌರ್ಜನ್ಯ ಖಂಡಿಸಿ ಸಂತ್ರಸ್ತ ಬಾಲಕಿ ಶಾಸಕನ ಮನೆ ಮುಂದೆ ಪೋಷಕರೊಡನೆ ಪ್ರತಿಭಟನೆ ನಡೆಸಿದ್ದ ಕಾರಣ ಆಕೆಯ ಪೋಷಕರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಇಷ್ಟೂ ಸಾಲದೆಂದು ಸಂತ್ರಸ್ತ ಬಾಲಕಿ ಕುಟುಂಬದ ನಾಲ್ವರನ್ನು ಅಪಘಾತದ ಮೂಲಕ ಕೊಲೆಗೈಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಮತ್ತು ಸಹಚರರನ್ನು ಗಲ್ಲಿಗೇರಿಸಬೇಕು. ಜೊತೆಗೆ ಆರೋಪಿ ಶಾಸಕನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತ ಬಾಲಕಿ ಕುಟುಂಬಕ್ಕೆ ನೀಡಬೇಕು. ಉತ್ತರ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ಸಿಗರಿಂದ ಅಸ್ಪøಶ್ಯತಾ ಆಚರಣೆ: ಕೇರಳ ರಾಜ್ಯದ ತ್ರಿಶೂಲ್ ಜಿಲ್ಲೆಯಲ್ಲಿ ದಲಿತ ಸಮುದಾಯದ ಶಾಸಕಿ ಗೀತಾಗೋಪಿಯವರು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಮಾಡಿದ ಸ್ಥಳ ಅಪವಿತ್ರವಾಗಿದೆ ಎಂದು ಸ್ಥಳೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಸಗಣಿ ನೀರಿನಿಂದ ಶುಚಿಗೊಳಿಸುವ ಮೂಲಕ ಅಸ್ಪøಶ್ಯತಾ ಆಚರಣೆ ಮಾಡಿದ್ದಾರೆ. ಇವರ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯ ಬೇಕೆಂದೂ ಒತ್ತಾಯಿಸಿದರು. ಸಂಘಟನೆ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡ ಕಿರಂಗೂರುಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »