ಟಿಪ್ಪು ಜಯಂತಿ ರದ್ದು ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಟಿಪ್ಪು ಜಯಂತಿ ರದ್ದು ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

August 4, 2019

ಮೈಸೂರು, ಆ.3(ಪಿಎಂ)- ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿ ಸಿದ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಟಿಪ್ಪು ಜಯಂತಿ ಆಚರಣಾ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಟಿಪ್ಪು ಸುಲ್ತಾನ್ ಒಬ್ಬ ಜನಪರ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ರಾಜ. ಆತನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವವರೇ ಸಣ್ಣವರಾಗುತ್ತಾರೆಯೇ ಹೊರತು ಟಿಪ್ಪು ಸಣ್ಣವನಾಗಲ್ಲ. ಅವನಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇತ್ತು. ಹಿಪ್ಪುನೇರಳೆ ಬೆಳೆಯನ್ನು ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದ ಎಂದು ತಿಳಿಸಿದರು.

ಟಿಪ್ಪು ಯುದ್ಧಭೂಮಿಯಲ್ಲಿ ವೀರ ಮರಣವನ್ನಪ್ಪಿದ ಏಕೈಕ ರಾಜ. ಇಡೀ ವಿಶ್ವದಲ್ಲೇ ಯಾವುದೇ ರಾಜ ರಣರಂಗದಲ್ಲಿ ಮಡಿದ ನಿದರ್ಶನವಿಲ್ಲ. ಆತ ನಾಲ್ಕನೇ ಮೈಸೂರು ಯುದ್ಧದಲ್ಲಿ ಮೃತಪಡದೇ ಇದ್ದರೆ, ಕಾವೇರಿ ನದಿಗೆ ಅಣೆಕಟ್ಟೆ ಕಟ್ಟುವ ಅವನ ಗುರಿ ಸಾಧಿಸುತ್ತಿದ್ದ. ಮದ್ರಾಸ್ ಪ್ರಾಂತ್ಯ ಅವನ ವಶದಲ್ಲೇ ಇದ್ದ ಹಿನ್ನೆಲೆಯಲ್ಲಿ ನದಿ ನೀರು ಹಂಚಿಕೆ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಅರಿತು ಜಯಂತಿ ಆಚರಣೆಯ ರದ್ದು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ವೇದಿಕೆ ಅಧ್ಯಕ್ಷ ಜಾಕೀರ್ ಹುಸೇನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »