ಮೈಸೂರು,ಜು.9(ವೈಡಿಎಸ್)-ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರಿಗೆ ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ಒಕ್ಕಲಿಗರ ಸಂಘಟನೆಗಳ ಮುಖಂಡರು ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿದರು.
ಮಂಗಳವಾರ ಸಂಜೆ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಹಿತ ರಕ್ಷಣಾ ಸಮಿತಿ, ಕೆಂಪೇಗೌಡ ಸ್ಮರಣೋತ್ಸವ ಸಮಿತಿ, ರಾಜ್ಯ ಒಕ್ಕಲಿಗರ ವೇದಿಕೆ ಮುಖಂಡರು ಕಪ್ಪುಪಟ್ಟಿ ಧರಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಒಕ್ಕಲಿಗ ಸಮುದಾಯದ ನಾಯಕರು. ಇವರು ಮುಖ್ಯ ಮಂತ್ರಿಯಾದ ದಿನದಿಂದಲೂ ಕಿರುಕುಳ ನೀಡಲಾಗುತ್ತಿದ್ದು, ಸುಗಮವಾಗಿ ಆಡಳಿತ ನಡೆಸಲು ಅವಕಾಶ ನೀಡಲಿಲ್ಲ. ಹಾಗೆಯೇ ಡಿ.ಕೆ.ಶಿವಕುಮಾರ್ ಮೇಲೂ ಇಡಿ, ಸಿಬಿಐ ದಾಳಿ ಎಂದು ಎದುರಿಸಲಾಗುತ್ತಿದೆ. ಒಕ್ಕಲಿಗ ಸಮುದಾಯದ ನಾಯಕರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಕ್ಕಲಿಗ ಸಮುದಾಯದವರು ಅಧಿಕಾರಕ್ಕೆ ಬಂದಾಗಲೆಲ್ಲ ಒಂದಲ್ಲ ಒಂದು ರೀತಿ ಕಿರುಕುಳ ನೀಡಲಾಗುತ್ತಿದೆ. ಒಕ್ಕಲಿಗರು ಶಾಂತಿ ಪ್ರಿಯರು. ಹಾಗೆಂದು ಒಕ್ಕಲಿಗರಿಗೆ ತೊಂದರೆ ನೀಡಿದರೆ ಶಾಂತಿಯಿಂದ ಕೂರಲು ಸಾಧ್ಯವಿಲ್ಲ. ಒಕ್ಕಲಿಗ ನಾಯಕರ ಮೇಲೆ ಇದೇ ರೀತಿಯ ದೌರ್ಜನ್ಯಗಳು ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗ ಒಕ್ಕೂಟಗಳ ಸದಸ್ಯರಾದ ಸತೀಶ್ ಗೌಡ, ಕೆ.ಆರ್.ಮಿಲ್ ಶಿವಣ್ಣ, ಜಯರಾಮಣ್ಣ, ಶ್ರೀನಿವಾಸ್ ಬೆಳವಾಡಿ, ಕಾಂತರಾಜು, ಶೇಖರ್, ಸಂತೋಷ್, ಗಿರೀಶ್‍ಗೌಡ, ಕೃಷ್ಣೇಗೌಡ, ಹರೀಶ್, ಬಸವರಾಜು, ಸುರೇಶ, ಇಲವಾಲ ನಾಗರಾಜ್, ಕೆ.ಜಿ.ಕೊಪ್ಪಲು ಕುಮಾರ್‍ಗೌಡ, ಹಿನಕಲ್ ನಾಗೇಂದ್ರ, ಪ್ರಸನ್ನ, ಹರೀಶ್‍ಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ವಾಗ್ವಾದ: ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಹೇಳಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.