ಪೌರತ್ವ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ
ಮೈಸೂರು

ಪೌರತ್ವ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ

December 24, 2019
  • ಬೀದಿಗಿಳಿದು ಮುಸ್ಲಿಮರ ಆಕ್ರೋಶ
  • ಹಾರಾಡಿದ ರಾಷ್ಟ್ರಧ್ವಜ
  • ಮೊಳಗಿದ ರಾಷ್ಟ್ರಗೀತೆ
  • ರಕ್ಷಣಾ ಕವಚ ತೊಟ್ಟು ಕರ್ತವ್ಯ ನಿರ್ವಹಿಸಿದ ಎಸ್ಪಿ, ಎಎಸ್ಪಿ

ಚಾಮರಾಜನಗರ, ಡಿ.23(ಎಸ್‍ಎಸ್)- ಪೌರತ್ವ ಮಸೂದೆ ಕಾಯ್ದೆಯನ್ನು ಹಿಂಪಡೆಯ ಬೇಕು ಹಾಗೂ ಎನ್‍ಆರ್‍ಸಿ ದೇಶಾದ್ಯಂತ ಜಾರಿ ಗೊಳಿಸಬಾರದು ಎಂದು ಆಗ್ರಹಿಸಿ ಮುಸ್ಲಿಂ ಸಮು ದಾಯ ಸೋಮವಾರ ಪ್ರತಿಭಟನೆ ನಡೆಸಿದರು.

ಎನ್‍ಆರ್‍ಸಿ ಮತ್ತು ಸಿಎಎ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಹಸ್ರಾರು ಮುಸ್ಲಿಂರು ಜಮಾಯಿಸಿದರು. ರಾಷ್ಟ್ರಧ್ವಜ ಹಿಡಿದು ಪೌರತ್ವ ಮಸೂದೆ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಬರೆಯಲಾಗಿದ್ದ ಭಿತ್ತಿಪತ್ರ ಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ಆರಂಭಿಸಿ ದರು. ಸತ್ತಿ ಸರ್ಕಲ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೂಲಕ ಭುವನೇಶ್ವರಿ ವೃತ್ತಕ್ಕೆ ಆಗಮಿಸಿ ದರು. ರಾಷ್ಟ್ರಗೀತೆ ಹಾಡುವ ಮೂಲಕ ನಾಗರಿಕರ ಗಮನ ಸೆಳೆದರು. ನಂತರ ವೃತ್ತದಲ್ಲಿ ಧರಣಿ ಕುಳಿತರು. ಹಲವಾರು ಮಂದಿ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು. ಮಹಾತ್ಮ ಗಾಂಧಿ, ಅಂಬೇಡ್ಕರ್, ಚಂದ್ರಶೇಖರ ಅಜಾದ್, ಭಗತ್‍ಸಿಂಗ್‍ರ ಪರ ಘೋಷಣೆ ಕೂಗಿದರು.

ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಬದಲಿ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಭುವನೇಶ್ವರಿ ವೃತ್ತದಲ್ಲಿ ಧರಣಿ ನಡೆಸಿದ ಮುಸ್ಲಿಂರು ಪೌರತ್ವ ಮಸೂದೆ ಕಾಯ್ದೆ ಹಾಗೂ ಎನ್‍ಆರ್‍ಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನ ವಿರೋಧಿ ಪೌರತ್ವ ಮಸೂದೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿದೆ. ಈ ಕರಾಳ ಕಾನೂನನ್ನು ಖಂಡಿಸಿ ಈಗಾಗಲೇ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಕಾಯ್ದೆಯಿಂದ ದೇಶದ ಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ ಉಂಟಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಸಂವಿಧಾನದ ಪರಿಚ್ಛೇದ 14ರ ಪ್ರಕಾರ ಜಾತಿ ಆಧಾರಿತ ಕಾನೂನು ಅಥವಾ ನೀತಿ ನಿಯಮ ಗಳನ್ನು ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಸಹ ಕೇಂದ್ರ ಸರ್ಕಾರ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ಈ ಮೂಲಕ ಧರ್ಮಾಧಾರಿತ ಪೌರತ್ವ ಮಸೂದೆ ಕಾಯ್ದೆ ಬಲಪ್ರಯೋಗದ ಮೂಲಕ ಜನತೆಯ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು. ದೇಶದ ಏಕತೆಗಾಗಿ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿ ಯುವ ನಿಟ್ಟಿನಲ್ಲಿ ತಕ್ಷಣ ಕೇಂದ್ರ ಸರ್ಕಾರ ಈ ಕರಾಳ ಮಸೂದೆಯನ್ನು ಹಿಂಪಡೆಯಬೇಕು ಹಾಗೂ ಎನ್‍ಆರ್‍ಸಿಯನ್ನು ದೇಶಾದ್ಯಂತ ಜಾರಿ ಗೊಳಿಸಬಾರದು ಎಂದು ಒತ್ತಾಯಿಸಿದರು.

ಎನ್‍ಆರ್‍ಸಿ ಮತ್ತು ಸಿಎಎ ವಿರೋಧಿ ಒಕ್ಕೂಟದ ಸಂಚಾಲಕ ಮೌಲನಾ ಮುಫ್ತಿ ಜಾಘರ್ ಹುಸೇನ್, ಹಿರಿಯ ರಂಗಕರ್ಮಿ ಕೆ. ವೆಂಕಟರಾಜು, ಕೆಪಿಸಿಸಿ ಸದಸ್ಯ ಸೈಯದ್‍ರಫಿ ಮುಖಂಡರಾದ ಜಿ.ಎಂ. ಗಾಡ್ಕರ್, ಸಿ.ಎಂ. ಕೃಷ್ಣಮೂರ್ತಿ, ಪರ್ವತ್‍ರಾಜ್, ಅಬ್ರಾರ್ ಅಹಮದ್, ಇಸ್ಮಾಯಿಲ್, ಮಹೇಶ್, ಮೌಲನಾ ಮಹಮ್ಮದ್, ಮುಸೀನ್ ಸಿದ್ದಿಕಿ, ಮೌಲನಾ ಮಹಮ್ಮದ್ ಉಮ್ಮಾರ್, ಫಾರೂಕಿ ಉಮ್ರಿ, ಮೌಲನಾ ಮಹಮ್ಮದ್ ಇಸ್ಮಾಯಿಲ್ ರಶೀದ್, ಮೌಲಾನ ಅಬ್ದುಲ್ ಖಾದೀರ್ ರಶೀದ್, ಮುನ್ನಾ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಸ್‍ಪಿ ಹೆಚ್.ಡಿ. ಆನಂದ್‍ಕುಮಾರ್, ಎಎಸ್‍ಪಿ ಅನಿತಾ ಹದ್ದಣ್ಣವರ್ ರಕ್ಷಣಾ ಕವಚ ತೊಟ್ಟು ಬಂದೋಬಸ್ತ್‍ನ ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು. ಮುಸ್ಲಿಂ ಯುವಕರು ಬಂದೋಬಸ್ತ್‍ಗೆ ಆಗಮಿಸಿದ್ದ ಪೊಲೀಸರಿಗೆ ಗುಲಾಬಿ ಹೂ ನೀಡಿ ಅವರನ್ನು ಆತ್ಮೀಯ ವಾಗಿ ಮಾತನಾಡಿಸಿದ್ದು ಗಮನ ಸೆಳೆಯಿತು.

Translate »