ಯುವ ಪೀಳಿಗೆಗಾಗಿ ಜಯಚಾಮರಾಜ ಒಡೆಯರ್ ಕುರಿತ ಪುಸ್ತಕ ಪ್ರಕಟಿಸಿ
ಮೈಸೂರು

ಯುವ ಪೀಳಿಗೆಗಾಗಿ ಜಯಚಾಮರಾಜ ಒಡೆಯರ್ ಕುರಿತ ಪುಸ್ತಕ ಪ್ರಕಟಿಸಿ

July 17, 2019

ಮೈಸೂರು,ಜು.16(ಆರ್‍ಕೆ)- ಮೈಸೂರು ಸಂಸ್ಥಾನವನ್ನಾಳಿದ ಶ್ರೀ ಜಯಚಾಮ ರಾಜ ಒಡೆಯರ್ ಅವರ ಜೀವನ ಚರಿತ್ರೆ ಕುರಿತಾದ ಸಮಗ್ರ ಪುಸ್ತಕವನ್ನು ಹೊರ ತನ್ನಿ ಎಂದು ಖ್ಯಾತ ನಾಣ್ಯಶಾಸ್ತ್ರತಜ್ಞರಾದ ಪುರಾತತ್ವ ಇತಿಹಾಸ ನಿವೃತ್ತ ಪ್ರಾಧ್ಯಾಪಕ ಮತ್ತು ಭಾರತೀಯ ವಿದ್ಯಾಭವನ(ಬಿವಿಬಿ) ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ. ಎ.ವಿ. ನರಸಿಂಹಮೂರ್ತಿ ಅವರು ಇಂದಿಲ್ಲಿ ಸಲಹೆ ನೀಡಿದ್ದಾರೆ.

ಶ್ರೀ ಜಯ ಚಾಮರಾಜ ಅರಸು ಶಿಕ್ಷಣ ಟ್ರಸ್ಟ್ ವತಿಯಿಂದ ಮೈಸೂರಿನ ಜಗನ್ಮೋ ಹನ ಅರಮನೆಯಲ್ಲಿ ಏರ್ಪಡಿಸಿದ್ದ ಜಯ ಚಾಮರಾಜ ಒಡೆಯರ್ ಜನ್ಮ ಶತ ಮಾನೋತ್ಸವ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ಯುವಕರು ಹಾಗೂ ಮುಂದಿನ ಪೀಳಿಗೆಗೆ ಜಯ ಚಾಮರಾಜ ಒಡೆಯರ್ ಅವರ ಆಡಳಿತ ವೈಖರಿ ಬಗ್ಗೆ ತಿಳಿಸು ವುದು ಅತ್ಯಗತ್ಯವಾಗಿರುವುದರಿಂದ ಸಮಗ್ರ ಮಾಹಿತಿಯುಳ್ಳ ಪುಸ್ತಕವನ್ನು ಬರೆಯ ಬೇಕು. ನಿಮ್ಮ ಟ್ರಸ್ಟ್ ವತಿಯಿಂದ ಪುಸ್ತಕ ತನ್ನಿ. ನಿಮ್ಮಿಂದ ಆಗದಿದ್ದರೆ ಹೇಳಿ ಭಾರ ತೀಯ ವಿದ್ಯಾ ಭವನದಿಂದ ಆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಬಹುಮುಖ ಪ್ರತಿಭಾ ವಿದ್ವಾಂಸರಾಗಿದ್ದ ಒಡೆಯರ್ 94 ಕೃತಿಗಳನ್ನು ರಚಿಸಿದ್ದಾರೆ. ಜನಗಳ ಮನಸ್ಸಿಗೆ ಸ್ಪಂದಿಸುತ್ತಿದ್ದರಲ್ಲದೆ, ಬಡವರ ಬಗ್ಗೆ ಕಳಕಳಿ ಹೊಂದಿದ್ದರು. ಶೃಂಗೇರಿ ಮಹಾಸಂಸ್ಥಾನದೊಂದಿಗೆ ನಂಟು ಹೊಂದಿದ್ದ ಅವರು, ಶಾರದಾಂಬೆ ಮಡಿಲಲ್ಲಿ ಮನಶ್ಯಾಂತಿ ಪಡೆಯುತ್ತಿದ್ದರು. ಜಗನ್ಮೋಹನ ಅರಮನೆ ಯಲ್ಲಿ ಸಂಗೀತ ಕಛೇರಿಗಳು ಹಾಗೂ ಲಲಿತ ಮಹಲ್ ಪ್ಯಾಲೇಸ್ ಎದುರು ವಿದ್ವತ್ ಗೋಷ್ಠಿಗಳನ್ನು ಏರ್ಪಡಿಸಿ ಅರ್ಥ ಪೂರ್ಣ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ಪ್ರೊ. ನರಸಿಂಹಮೂರ್ತಿ ಅವರು ನೆನಪಿಸಿದರು.

ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ `ದತ್ತಾತ್ರೇಯ ಅಂಡ್ ಹಿಸ್ ಗೋಲ್’ ಪುಸ್ತಕ ರಚನೆಗೆ ಡಾ. ಎಸ್. ರಾಧಾ ಕೃಷ್ಣನ್ ಅವರು ಮುನ್ನುಡಿ ಬರೆದಿದ್ದು, ಜಯ ಚಾಮರಾಜ ಒಡೆಯರ್ ಅವರ ವಿದ್ವತ್ತಿಗೆ ಸಾಕ್ಷಿ ಎಂದ ಅವರು, ಬರಹ ಗಾರರಿಗೆ ಮಾದರಿಯಾಗಿದ್ದರು. ಉತ್ತಮ ಸ್ಕೌಟ್ ಆಗಿದ್ದ ಒಡೆಯರ್ ಅವರು ಮೈಸೂ ರಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಾಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.

ಅಂದು ಮಹಾರಾಜರನ್ನು ಜನರು ದೇವ ರೆಂದೇ ಭಾವಿಸುತ್ತಿದ್ದರು. ಅವರ ಹೆಸರೇಳೇ ದೇವರ ಮುಂದೆ ಮಂತ್ರಪುಷ್ಪ ಜಪಿಸ ಲಾಗುತ್ತಿತ್ತು. ಕರ್ನಾಟಕ ಸಂಗೀತ ಶಾಸ್ತ್ರೀಯ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದಿದ್ದ ಜಯ ಚಾಮರಾಜ ಒಡೆಯರ್, ಶಿವ, ಪಾರ್ವತಿ, ಲಕ್ಷ್ಮಿ, ಸರಸ್ವತಿ ಹೆಸರಿನಲ್ಲಿ ಸಂಗೀತದ ರಾಜ ಚಮತ್ಕಾರ ಮಾಡುತ್ತಿದ್ದರು. ಸಿಂಹಾಸನ ಏರುವ ಮೊದಲು ಪಂಡಿತ ರಿಂದ ಆಶೀರ್ವಾದ ಪಡೆಯುತ್ತಿದ್ದರು ಎಂದೂ ಪ್ರೊ.ನರಸಿಂಹಮೂರ್ತಿ ನುಡಿದರು.

ಕರುಣೆ, ಉಪಕಾರ ಗುಣ ಮೈಗೂಡಿಸಿ ಕೊಂಡಿದ್ದ ಅವರು, ಸಂಸ್ಥಾನ ಕೈಬಿಟ್ಟು ಹೋದಾಗ ಜನಗಳ ಪ್ರೀತಿ ವಿಶ್ವಾಸ ಮುಖ್ಯ ಎಂಬ ಭಾವನೆಯಿಂದ ಯಾವುದೇ ಹಿಂಸಾಚಾರವಿಲ್ಲದೆ ಭಾರತ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರಲು ಸಹಕರಿ ಸಿದರು ಎಂದೂ ಅವರು ಇದೇ ಸಂದರ್ಭ ನೆನಪಿಸಿಕೊಂಡರು.

ನಂತರದ ರಾಜಕೀಯ ಕಂಡು ಬೇಸತ್ತು ಮನಶ್ಯಾಂತಿಗಾಗಿ ಶೃಂಗೇರಿಗೆ ಹೋಗಲಾರಂಭಿಸಿ ಅತಿರುದ್ರ ಮಹಾ ಯಾಗಗಳನ್ನು ಮಾಡಿಸಿ ಶ್ರೀ ಶಾರ ದಾಂಬೆ ದರ್ಶನ ಮಾಡುವ ಮೂಲಕ ಆಧ್ಯಾತ್ಮಿಕದ ಕಡೆಗೆ ವಾಲಿದ್ದ ಅವರು, ನಾಡಿನ ಜನರ ಒಳಿತಿಗಾಗಿ ಹಲವು ಯೋಜನೆಗಳನ್ನು ಕೊಟ್ಟ ದೈವಾಂಶ ಸಂಭೂತರಾಗಿ ಇಹಲೋಕ ತ್ಯಜಿಸಿದರು ಎಂದು ಪ್ರೊ. ನರಸಿಂಹಮೂರ್ತಿ ಇದೇ ವೇಳೆ ನುಡಿದರು.

ಶ್ರೀ ಜಯ ಚಾಮರಾಜ ಅರಸು ಶಿಕ್ಷಣ ಟ್ರಸ್ಟ್ ಮಹಾಪೋಷಕರಾದ ರಾಜಮಾತೆ ಪ್ರಮೋದಾದೇವಿ ಒಡೆಯರ್, ಅಧ್ಯಕ್ಷ ರಾದ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್, ಕಾರ್ಯದರ್ಶಿ ಡಾ. ಭಾರತಿ ಅರಸ್, ಟ್ರಸ್ಟಿಗಳಾದ ವರ್ಚಸ್ವಿ ರಾಜೇ ಅರಸ್, ಮಹೇಶ್ ಅರಸ್, ಮಾಜಿ ಮೇಯರ್ ಹೆಚ್.ಎನ್.ಶ್ರೀಕಂಠಯ್ಯ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿದ ಗಣ್ಯರು, ಜಯಚಾಮರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೇರಿದಂತೆ ನಾಲ್ವರು ಯದುವಂಶಸ್ಥರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು.

Translate »