ಮೈಸೂರು ಬಳಿ ಪಿರಮಿಡ್ ಶೈಲಿಯ `ಶ್ರೀ ಶಿವದತ್ತ ಸಾಯಿ ಮಂದಿರ’
ಮೈಸೂರು

ಮೈಸೂರು ಬಳಿ ಪಿರಮಿಡ್ ಶೈಲಿಯ `ಶ್ರೀ ಶಿವದತ್ತ ಸಾಯಿ ಮಂದಿರ’

February 10, 2020

ಮೈಸೂರು,ಫೆ.9(ಎಸ್‍ಬಿಡಿ)- ಮೈಸೂರು ಸಮೀಪ ಪಿರಮಿಡ್ ಶೈಲಿಯಲ್ಲಿ ವಿನೂತನವಾಗಿ ನಿರ್ಮಿಸಿರುವ `ಶ್ರೀ ಶಿವದತ್ತ ಸಾಯಿ ಮಂದಿರ’ ಉದ್ಘಾಟನಾ ಸಮಾರಂಭ ವೈಭವದಿಂದ ನೆರವೇರಿತು.

ಮಂಡ್ಯ ಜಿಲ್ಲೆ ವ್ಯಾಪ್ತಿಯ ಮೊಗರಹಳ್ಳಿ ಮಂಟಿಯಲ್ಲಿ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ, ಉರಗ ರಕ್ಷಕ ಸ್ನೇಕ್ ಶ್ಯಾಮ್ (ಬಾಲಸುಬ್ರಹ್ಮಣ್ಯ) ನಿರ್ಮಿಸಿ ರುವ ಈ ಮಂದಿರವನ್ನು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಉದ್ಘಾಟಿಸಿದರು.

ಸಂಸ್ಥಾಪಕ ಸ್ನೇಕ್ ಶ್ಯಾಮ್ ಅವರ ಕುಟುಂಬ ಸದಸ್ಯರು ಸೇರಿದಂತೆ ಸಾವಿ ರಾರು ಭಕ್ತರು ಪಾಲ್ಗೊಂಡಿದ್ದರು. ಶಿವ, ಪಾರ್ವತಿ, ಅರ್ಧನಾರೀಶ್ವರ, ಸತ್ಯ ನಾರಾ ಯಣ, ದತ್ತಾತ್ರೇಯ, ಗಣೇಶ, ಸುಬ್ರಹ್ಮಣ್ಯಸ್ವಾಮಿ, ಶಿರಡಿ ಸಾಯಿಬಾಬಾ ದೇವರ ವಿಗ್ರಹಗಳನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಫೆ.4ರಿಂದಲೂ ವಿಗ್ರಹ ಪ್ರತಿಷ್ಠಾಪನಾ, ಕುಂಭಾಭಿಷೇಕ, ಹೋಮ, ದೀಪಾರಾಧನೆ, ಗಣಪತಿ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿವೆ. ಮೊಗರಹಳ್ಳಿ ಮಂಟಿ ವಿಶ್ವರೂಪ ಆಂಜನೇಯ ದೇವಸ್ಥಾನದ ಹಿಂಭಾಗದ 40×50 ಅಡಿ ವಿಸ್ತೀರ್ಣದ ನಿವೇಶನದಲ್ಲಿ ನೆಲೆಗೊಂಡಿರುವ `ಶ್ರೀ ಶಿವದತ್ತ ಸಾಯಿಮಂದಿರ’ ಬಲು ಆಕರ್ಷ ಣೀಯವಾಗಿದೆ. ಜತೆಗೆ ಧ್ಯಾನ ಮಂದಿರದ ವಾತಾವರಣ ಇಲ್ಲಿದೆ. ನಂದಿ ಹಾಗೂ ರಾಣಿ ಹೆಸರಿನ ಗೋವುಗಳಿರುವುದು ಮಂದಿರದ ಮತ್ತೊಂದು ವಿಶೇಷ.

Translate »