ಮೈಸೂರು: ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಲಭ್ಯ ವಿರುವ 89 ನಾಗರಿಕ ಸೌಲಭ್ಯ(ಸಿಎ) ನಿವೇಶನಗಳ ಹಂಚಿಕೆಗೆ ಶೀಘ್ರ ಅರ್ಜಿ ಆಹ್ವಾನಿಸಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಪಿ.ಎಸ್.ಕಾಂತರಾಜು ತಿಳಿಸಿದ್ದಾರೆ.
ಮೈಸೂರಿನ ವಿಜಯನಗರ 4ನೇ ಹಂತ, ಶ್ರೀರಾಂಪುರ, ದಟ್ಟಗಳ್ಳಿ, ದೇವನೂರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಂಚಿಕೆಗೆ ಲಭ್ಯವಿರುವ 89 ನಿವೇಶನ ಗಳನ್ನು ಪಟ್ಟಿ ಮಾಡ ಲಾಗಿದೆ. ಈ ನಿವೇಶನ ಗಳ ಹಂಚಿಕೆಗೆಂದೇ ಪ್ರತ್ಯೇಕ ಉಪ ಸಮಿತಿ ರಚಿಸಿದ ನಂತರ, ಸಮಿತಿ ವರದಿಯಂತೆ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲು ಹೊಸದಾಗಿ ಅಧಿ ಸೂಚನೆ ಹೊರಡಿಸುತ್ತೇವೆ ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಸಭೆಯ ನಿರ್ಧಾರಕ್ಕೆ 457 ನಿವೇಶನ ಗಳು: ಕಳೆದ 20-25 ವರ್ಷಗಳ ಹಿಂದೆ ಹಂಚಿಕೆ ಮಾಡಿದ್ದರೂ, ನಿಯಮಾನುಸಾರ ಕಟ್ಟಡ ನಿರ್ಮಿಸಿ, ಉದ್ದೇಶಿತ ಚಟುವಟಿಕೆಗಳನ್ನು ಆರಂಭಿಸದೆ ನಿಯಮ ಉಲ್ಲಂಘನೆ ಯಾಗಿರುವ 457 ಸಿಎ ನಿವೇಶನಗಳ ಬಗ್ಗೆ ಮುಂದಿನ ಮುಡಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ಪ್ರಸ್ತಾವನೆ ಮಂಡಿಸಲಾಗು ವುದು ಎಂದು ಕಾಂತರಾಜು ಹೇಳಿದರು.
ಮೈಸೂರಿನ ಪ್ರಮುಖ ಬಡಾವಣೆ (Prime Layout)ಗಳಲ್ಲೇ ನಿಯಮ ಉಲ್ಲಂಘನೆಯಾಗಿರುವ 457 ಸಿಎ ನಿವೇಶನ ಗಳಿದ್ದು, ಕೆಲವರು ಕಾಯ್ದೆಯ ಮೂಲ ನಿಯಮವನ್ನೂ ಪಾಲಿಸಿಲ್ಲ. ಹಣ ಪಾವತಿಸ ದಿರುವುದು, ಗುತ್ತಿಗೆ ಕರಾರು ಮಾಡಿಕೊಳ್ಳ ದಿರುವುದು, ಕಟ್ಟಡ ನಿರ್ಮಿಸದಿರುವುದು, ಉದ್ದೇಶ ಬದಲಿಸಿರುವುದೂ ಸೇರಿದಂತೆ ಇನ್ನಿತರ ಷರತ್ತು ಉಲ್ಲಂಘನೆ ಮಾಡಿರುವ ನಿವೇಶನಗಳ ಪಟ್ಟಿ ತಯಾರಿಸಿ, ಪೂರಕ ದಾಖಲೆಗಳೊಂದಿಗೆ ಪ್ರಾಧಿಕಾರದ ಸಭೆ ಮುಂದೆ ಇರಿಸಲಾಗುವುದು ಎಂದ ಅವರು, ಕಾನೂನಿನನ್ವಯ ಅಂತಹ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ವಿದೆ. ಸಭೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ನೋಡಬೇಕು ಎಂದರು.
ಹಾಸ್ಟೆಲ್‍ಗಳಿಗೆ ಹಂಚಿಕೆ: ವಿದ್ಯಾರ್ಥಿನಿಲಯ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಗೆ 4, ಅಲ್ಪಸಂಖ್ಯಾತರ ಇಲಾಖೆಗೆ 3 ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ 1 ಸಿಎ ನಿವೇಶನವನ್ನು ವಾರದ ಹಿಂದಷ್ಟೇ ಮಂಜೂರು ಮಾಡಲಾಗಿದ್ದು, ಈವರೆಗೆ ಮುಡಾದಿಂದ ಸರ್ಕಾರಿ ಹಾಸ್ಟೆಲ್‍ಗಳಿಗೆ ಒಟ್ಟು 22 ಸಿಎ ನಿವೇಶನ ಗಳನ್ನು ನೀಡಿದಂತಾಗಿದೆ.
2 ಸಾವಿರ ಗುಂಪು ಮನೆ ನಿರ್ಮಾಣ: ಬೇಡಿಕೆಗನುಗುಣವಾಗಿ ಸೂರಿಲ್ಲದವರಿಗೆ ಕೈಗೆಟಕುವ ದರದಲ್ಲಿ ಗುಂಪು ಮನೆಗಳನ್ನು ಒದಗಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ. ಮುಡಾ ವ್ಯಾಪ್ತಿಯ ದಟ್ಟಗಳ್ಳಿ, ರವೀಂದ್ರ ನಾಥ ಠಾಕೂರ್ ನಗರ, ಕನಕದಾಸ ನಗರ, ವಿಜಯನಗರ 2ನೇ ಹಂತ, 4ನೇ ಹಂತದ 2ನೇ ಘಟ್ಟ, 3ನೇ ಹಂತ ಹಾಗೂ ದೇವನೂರು ಬಡಾವಣೆಗಳಲ್ಲಿ 16 ಎಕರೆ ಜಾಗ ಲಭ್ಯವಿದ್ದು, ಈ ಬಡಾವಣೆಗಳಲ್ಲಿ ಒಟ್ಟು 2 ಸಾವಿರ ಮನೆಗಳನ್ನು ನಿರ್ಮಿ ಸಲು ಮುಡಾ ಡಿಪಿಆರ್ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿತ್ತು. ಗುಂಪು ಮನೆ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ನೀತಿ(Policy) ಮಾಡಿಕೊಳ್ಳಿ ಎಂದು ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಕೆಲ ಷರತ್ತುಗಳಿಗೆ ವಿನಾಯಿತಿ ನೀಡಿ ಎಂದು ಮುಡಾ ಸರ್ಕಾರವನ್ನು ಕೇಳಿಕೊಂಡಿರುವುದರಿಂದ ಈ ಯೋಜನೆಗೆ ಇನ್ನೂ ಚಾಲನೆ ದೊರೆತಿಲ್ಲ.