ಟಿಪ್ಪು ಜಯಂತಿ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ
ಕೊಡಗು

ಟಿಪ್ಪು ಜಯಂತಿ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ

November 9, 2018

ವಿರಾಜಪೇಟೆ:  ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಹಾಗೂ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ವತಿಯಿಂದ ವಿರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಪ್ರತಿಭಟನಾಕಾರ ರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಯಾವುದೇ ಜನಾಂಗದ ವಿರುದ್ಧ ನಾವು ಅಪಪ್ರಚಾರ ಮಾಡಿಲ್ಲ. ಕೊಡಗಿನ ಪುಣ್ಯ ಕ್ಷೇತ್ರಗಳನ್ನು ನಾಶ ಮಾಡಿ, ಕೊಡಗಿನ ಸಹಸ್ರಾರು ಜನರನ್ನು ಹತ್ಯೆ ಮಾಡಿ ದಂತಹ ಟಿಪ್ಪುವಿನ ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಆಡಳಿತದಿಂದ ನ.10 ರಂದು ಅಚರಿಸುತ್ತಿರುವ ಟಿಪ್ಪು ಜಯಂತಿ ಕೊಡಗಿನ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಕೊಡಗು ಸೇರಿದಂತೆ ರಾಜ್ಯದ ಅನೇಕ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ದೇವಾಲಯಗಳನ್ನು ಟಿಪ್ಪು ದ್ವಂಸ ಮಾಡಿರುವುದು ಇತಿಹಾಸದ ದಾಖಲೆಯಲ್ಲಿದೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ವಿಧಾನಸೌಧದಲ್ಲಿ ಮಾತ ನಾಡಿ, ಟಿಪ್ಪು ಜಯಂತಿ ಅವಶ್ಯವಿಲ್ಲ. ಅದನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದರು. ಆದರೆ ಈಗ ಅವರೇ ಮುಖ್ಯ ಮಂತ್ರಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದು ಸರಿಯಲ್ಲ. ಇನ್ನೂ ಕಾಲ ಮಿಂಚಿಲ್ಲ. ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿ, ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಬಾರದು. ಹಾಗೇನಾದರು ಆಚರಣೆ ಮಾಡುವುದಾದರೆ ನಾವು ಹೋರಾಟಕ್ಕೆ ಸದಾ ಸಿದ್ಧರಿದ್ದೇವೆ ಎಂದು ಬೋಪಯ್ಯ ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಈ ಹಿಂದೆ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭ ಅಹಿತಕರ ಘಟನೆಗಳು ನಡೆದಿದ್ದರೂ, ಈ ಸರಕಾರ ಪುನ ಅಚರಣೆ ಮಾಡಲು ಮುಂದಾಗಿರುವುದು ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಣೆ ಮಾಡಬಾರದೆಂದು ಮನವರಿಕೆ ಮಾಡಿದ್ದರೂ ಮತ್ತೆ ಆಚರಣೆ ಮಾಡುತ್ತಿರುವುದನ್ನು ಉಗ್ರವಾಗಿ ವಿರೋಧಿಸುವುದಾಗಿ ಹೇಳಿದರು.

ಈ ಸಂದರ್ಭ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಐನಂಡ ಜಪ್ಪು ಅಚ್ಚಪ್ಪ ಮತ್ತು ಇತರರು ಮಾತನಾಡಿದರು. ಸಮಿತಿಯ ನೆಲ್ಲಿರ ಚಲನ್ ಕುಮಾರ್ ಅವರು ಸ್ಥಳಕ್ಕಾಗಮಿಸಿದ್ದ ಡಿವೈಎಸ್‍ಪಿ ನಾಗಪ್ಪ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ನಾಗಪ್ಪ, ಈ ಮನವಿಯನ್ನು ಸರಕಾರಕ್ಕೆ ಕಳಿಸುವುದಾಗಿ ತಿಳಿಸಿದರು. ಇದಕ್ಕೂ ಮೊದಲು ಪಟ್ಟಣದ ತೆಲುಗರ ಬೀದಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜೈನರ ಬೀದಿ, ದೊಡ್ಡಟ್ಟಿ ಚೌಕಿ ಮಾರ್ಗವಾಗಿ ಗಡಿಯಾರ ಕಂಬದವರೆಗೆ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚಿನ ಬಂದೊಬಸ್ತ್ ಏರ್ಪಡಿಸಿದ್ದರು.

Translate »