ಮೈಸೂರಲ್ಲಿ ಕಾಂಗ್ರೆಸ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ

August 10, 2018

ಮೈಸೂರು: ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ವಿಟ್ ಇಂಡಿಯಾ ಚಳವಳಿಯ 76ನೇ ಸ್ಮರಣಾ ಕಾರ್ಯ ಕ್ರಮವನ್ನು ಮೈಸೂರು ನಗರ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತ್ಯೇಕವಾಗಿ ಆಚರಿಸಿದವು.

ನಗರ ಕಾಂಗ್ರೆಸ್: ನಗರ ಕಾಂಗ್ರೆಸ್ ವತಿಯಿಂದ ಮೈಸೂರಿನ ದಾಸಪ್ಪ ವೃತ್ತದಲ್ಲಿ ರುವ ಕಾಂಗ್ರೆಸ್ ಭವನದಿಂದ ಗಾಂಧೀ ಚೌಕದವರೆಗೆ ಮೆರವಣಿಗೆ ನಡೆಸಲಾಯಿತು. `ಇಂದು ಶೋಷಣೆ, ದಬ್ಬಾಳಿಕೆ ಹಾಗೂ ಅಸಮಾನತೆ ಭಾರತ ಬಿಟ್ಟು ತೊಲಗಲಿ…’, `ಇದು ಸ್ವಾತಂತ್ರ್ಯ ಭಾರತ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು…’ ಎಂಬಿತ್ಯಾದಿ ಘೋಷ ವಾಕ್ಯಗಳ ಫಲಕಗಳು ಮೆರವಣಿಗೆಯಲ್ಲಿ ರಾರಾಜಿಸಿ, ಕಾಂಗ್ರೆಸ್ ಹೊಸ ಚಳವಳಿ ರೂಪಿಸಲು ಅಣಿಯಾಗುತ್ತಿದೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದವು.

ಕಾಂಗ್ರೆಸ್ ಧ್ವಜಗಳನ್ನಿಡಿದ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯು ರೈಲ್ವೆ ವೃತ್ತ, ಇರ್ವಿನ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಗಾಂಧೀ ಚೌಕ ತಲುಪಿತು. ಇಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲದೆ, ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು. ಇದೇ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ 93 ವರ್ಷ ಪ್ರಾಯದ ಸುಬ್ಬುರಾವ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸುಬ್ಬುರಾವ್ ಮಾತ ನಾಡಿ, ನಾನು ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಾ ರಂಭಿಸಿದೆ. ಮಹಾನ್ ಹೋರಾಟಗಾರರ ಸ್ಫೂರ್ತಿಯ ಮಾತು ನಮ್ಮನ್ನು ಹೋರಾಟಕ್ಕೆ ಪ್ರೇರೇಪಿಸಿತು. ಹೋರಾಟ ನನಗೆ ಹೆಮ್ಮೆ ಭಾವ ನೀಡಿದೆ ಎಂದು ನುಡಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇತಿಹಾಸ ತಿರು ಚುವ ಕೆಲಸ ನಡೆಯುತ್ತಿದೆ. ಭಾರತ ಸಂಸ್ಕೃತಿ ಮತ್ತು ಸಂವಿಧಾನಕ್ಕೆ ಕಳಂಕ ಉಂಟುಮಾಡುವ ಶಕ್ತಿಗಳು ಹೆಚ್ಚಾಗುತ್ತಿವೆ. ಇಂತಹ ಪಿಡುಗುಗಳ ವಿರುದ್ಧ ಇಂದು ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತ ಸಂವಿಧಾನ ಶ್ರೇಷ್ಠತೆ ಯಿಂದ ಕೂಡಿದ್ದು, ಇಂತಹ ಉತ್ತಮ ಸಂವಿಧಾನ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ಸಂವಿಧಾನದಿಂದಲೇ ಅಧಿಕಾರ ಪಡೆದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ವಿರುದ್ಧ ಹೋರಾಟಕ್ಕೆ ನಾವು ಸಜ್ಜಾಗಬೇಕಿದೆ ಎಂದು ಹೇಳಿದರು.

ಮಾಜಿ ಸಂಸದ ಸಿ.ಹೆಚ್.ವಿಜಯ ಶಂಕರ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದರಾಜು, ಮಾಜಿ ಮೇಯರ್‍ಗಳಾದ ಮೋದಾಮಣಿ, ಅಯೂಬ್‍ಖಾನ್, ಪಾಲಿಕೆ ಸದಸ್ಯ ಎನ್.ಧ್ರುವರಾಜ್, ಮಾಜಿ ಪಾಲಿಕೆ ಸದಸ್ಯ ಎಂ.ಶಿವಣ್ಣ ಸೇರಿದಂತೆ ಮತ್ತಿ ತರರು ಪಾಲ್ಗೊಂಡಿದ್ದರು.

Translate »