ಜಾತಿ ರಾಜಕಾರಣ ಸಮಾಜದ ಸ್ವಾಸ್ಥ್ಯಕ್ಕೆ  ಅಪಾಯಕಾರಿ: ಮಾಜಿ ಸ್ಪೀಕರ್ ಕೃಷ್ಣ ಆತಂಕ
ಮೈಸೂರು

ಜಾತಿ ರಾಜಕಾರಣ ಸಮಾಜದ ಸ್ವಾಸ್ಥ್ಯಕ್ಕೆ  ಅಪಾಯಕಾರಿ: ಮಾಜಿ ಸ್ಪೀಕರ್ ಕೃಷ್ಣ ಆತಂಕ

August 10, 2018

ಮೈಸೂರು: ಪ್ರಸ್ತುತ ರಾಜಕಾರಣದಲ್ಲಿ ಜಾತಿ ಪ್ರಭಾವ ಹೆಚ್ಚಾ ಗುತ್ತಿದ್ದು, ತಪ್ಪು ಮಾಡುವ ಸ್ವಜಾತಿಯರನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ಸ್ವಾಮೀಜಿಗಳು ಆರಂಭಿಸಿದ್ದಾರೆ. ಲೌಕಿಕ ಬದುಕಿನಲ್ಲಿ ಎಲ್ಲವನ್ನೂ ತ್ಯಜಿಸಿದ ಸ್ವಾಮೀಜಿಗಳಿಗೇಕೆ ರಾಜಕಾರಣದ ಉಸಾಬರಿ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಕೃಷ್ಣ ಪ್ರಶ್ನಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ’ಯ 76ನೇ ಸ್ಮರಣೋತ್ಸವದಲ್ಲಿ `ಜಾತಿ ಆಧಾರಿತ ಮತದಾನ ಎಷ್ಟು ಅಪಾಯ ಕಾರಿ?’ ವಿಷಯ ಕುರಿತು ಅವರು ಮಾತ ನಾಡಿದರು. ಜಾತಿಯ ಆಧಾರದಲ್ಲಿ ಯಾವುದೇ ಪಕ್ಷಗಳು ಹಾಗೂ ರಾಜಕಾರಣಿಗಳು ರಾಜಕಾರಣ ಮಾಡಬಾರದು. ಜಾತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕಾರಿ. ರಾಜಕಾರಣಿ ಯಾದವರು ಜಾತ್ಯಾತೀತ ಮನೋಭಾವ ದಲ್ಲಿ ಸಮಾಜಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಡಬೇಕು ಎಂದು ಹೇಳಿದರು.

ಆರ್ಯರು ಮಧ್ಯೆ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದರು. ಹೀಗೆ ಅನ್ಯ ಪ್ರದೇಶದಿಂದ ಬಂದು ಭಾರತದಲ್ಲಿ ಜಾತಿ ವ್ಯವಸ್ಥೆಗೆ ನಾಂದಿ ಹಾಡಿದರು. ದೇಶದ ಮೂಲ ನಿವಾಸಿಗಳನ್ನೇ ಶೂದ್ರರನ್ನಾಗಿ ಮಾಡಿದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವರ್ಗಗಳನ್ನು ವಿಂಗಡಿಸಿ ಜಾತಿಯಾಗಿ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡರು. ಇದೀಗ ಭಾರತದಲ್ಲಿ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಇದನ್ನು ತೊಲಗಿಸಬೇಕೆಂದರೆ ಅಂತರ್ಜಾತಿ ವಿವಾಹ ಒಂದೇ ಮಾರ್ಗ ಎಂದು ಕೃಷ್ಣ ಪ್ರತಿಪಾದಿಸಿದರು.

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕೆಂದು ಗಾಂಧೀ ಹೇಳಿದ್ದರು. ಆದರೆ ಸ್ವಾತಂತ್ರ್ಯದ ಬಳಿಕ ದೇಶದಲ್ಲಿದ್ದ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕಲು ಕಾಂಗ್ರೆಸ್ ಮುಂದುವರೆಯ ಬೇಕಾಯಿತು ಎಂದರು. ಉದ್ಘಾಟನೆ ನೆರವೇರಿಸಿದ ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ. ಎಂ.ಜಿ.ಕೃಷ್ಣಮೂರ್ತಿ ಮಾತನಾಡಿ, ಬ್ರಿಟಿಷರು ನಮ್ಮ ದೇಶದ ರಾಜರ ನಡುವೆ ಎತ್ತಿಕಟ್ಟಿ ಅಧಿಕಾರ ನಡೆಸಿದರು. ಆ ಮೂಲಕ ದೇಶದ ಸಂಪತ್ತು ಲೂಟಿ ಮಾಡಿದರು. ಸ್ವಾತಂತ್ರ್ಯ ಲಭಿಸಿದಾಗ ದೇಶದ ಆರ್ಥಿಕ ವ್ಯವಸ್ಥೆ ಅಧೋಗತಿಗೆ ತಲುಪಿತ್ತು. ಆ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ದೇಶವನ್ನು ಪ್ರಗತಿಯತ್ತ ಸಾಗಿಸಲು ಶ್ರಮಿಸಿದೆ ಎಂದು ಪ್ರತಿಪಾದಿಸಿದರು. ಕಳೆದ 60 ವರ್ಷ ದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎನ್ನುವವರಿಗೆ ದೇಶದ, ಸ್ವಾತಂತ್ರ್ಯ ಪಡೆದ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯದ ಬಳಿಕ ದೇಶವನ್ನು ಕಾಡುತ್ತಿದ್ದ ಬಡತನ ತೊಲಗಿಸಲು ಕಾಂಗ್ರೆಸ್ ಪಕ್ಷ ಶ್ರಮಿಸಿದೆ. ನಮ್ಮ ಈಗಿನ ಯುವಜನರಿಗೆ ಇತಿಹಾಸದ ಅರಿವಿಲ್ಲ.

ಸ್ವಾತಂತ್ರ್ಯ ಪಡೆಯಲು ತ್ಯಾಗ, ಬಲಿದಾನ ಮಾಡಿದ ಪ್ರಸಂಗಗಳು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಉಪಾಧ್ಯಕ್ಷ ಆರ್.ಪ್ರಕಾಶ್ ಕುಮಾರ್, ಮುಖಂಡರಾದ ನಂದಿನಿ ಚಂದ್ರಶೇಖರ್, ಮಂಜುನಾಥ ನಾಯ್ಕ, ಕೆ.ಮಾರುತಿ ಮತ್ತಿತರರು ಹಾಜರಿದ್ದರು.

Translate »