ಅರಮನೆ ಅಂಗಳದಲ್ಲಿ ರಘು ದೀಕ್ಷಿತ್ `ಸಂಗೀತ ಕಾರಂಜಿ’
ಮೈಸೂರು

ಅರಮನೆ ಅಂಗಳದಲ್ಲಿ ರಘು ದೀಕ್ಷಿತ್ `ಸಂಗೀತ ಕಾರಂಜಿ’

October 14, 2019

ಮೈಸೂರು, ಅ.13(ಎಸ್‍ಬಿಡಿ)- ಒಂದೆಡೆ ಹುಣ್ಣಿಮೆ ಚಂದಿರನ ಕ್ಷೀರ ಬೆಳಕು, ಮತ್ತೊಂದೆಡೆ ವಿದ್ಯುತ್ ದೀಪಾ ಲಂಕಾರದಿಂದ ಜಗಮಗಿಸುತ್ತಿದ್ದ ಅರಮನೆಯ ಸೊಬಗು. ನಡುವೆ ಸುಳಿದಾಡಿ ಮುದ ನೀಡುತ್ತಿದ್ದ ತಂಗಾಳಿ. ಈ ಸುಂದರ ಸಂಜೆಯಲ್ಲಿ ಹೊರಹೊಮ್ಮಿದ ವಿಶಿಷ್ಟ ಸಂಗೀತದ ಝೇಂಕಾರ ಸಾವಿರಾರು ಹೃದಯಗಳಲ್ಲಿ ಸಂಚಲನ ಮೂಡಿಸಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ಆಚರಿಸಲಾದ ಶ್ರೀ ಜಯಚಾಮರಾಜ ಒಡೆ ಯರ್ ಜನ್ಮ ಶತಮಾನೋತ್ಸವದ ಅಂಗವಾಗಿ ಭಾನುವಾರ ಸಂಜೆ ಅರಮನೆ ಮುಂಭಾಗ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಸಂಯೋಜಕ, ವಾದ್ಯ ಕಾರ ಹಾಗೂ ಗಾಯಕ ರಘು ದೀಕ್ಷಿತ್ ತಮ್ಮ ವಿಶಿಷ್ಟ ಗಾಯ ನದ ಮೂಲಕ ಕಿಕ್ಕಿರಿದಿದ್ದ ಸಾವಿರಾರು ಸಂಗೀತ ಪ್ರಿಯರ ಮನತಣಿಸಿದರು. ಮಹನೀಯರ ತತ್ವಪದ, ಜಾನಪದ ಶೈಲಿಯ ಸಾಹಿತ್ಯಕ್ಕೆ ಆಧುನಿಕ ವಾದ್ಯಗಳ ನಿನಾದ ಬೆರೆಸಿ, ಏರಿಳಿತ ಸ್ವರ, ಧಾಟಿಯಲ್ಲಿ ಹಾಡುಗಳ ಪ್ರಸ್ತುತಪಡಿಸಿದ ಪರಿಗೆ ಮನಸೋತ ಪ್ರೇಕ್ಷಕರು, ಮನಸ್ಸಿನ ತುಮುಲಗಳನ್ನು ಮರೆತು, ಸಂಗೀತ ಲೋಕದಲ್ಲಿ ವಿಹರಿಸಿ, ಸಂಭ್ರಮಿಸಿದರು.

`ಕಂಡೆ ಕಂಡೆ ನಾ, ಕಂಡೆ ಪರಶಿವನಾ..’ ಹಾಡಿನೊಂದಿಗೆ ರಘು ದೀಕ್ಷಿತ್ ಗಾಯನ ಯಾನ ಆರಂಭಗೊಂಡಿತು. ಈ ಹಾಡಿಗೆ `ಆಯಾನ’ ಸಂಸ್ಥೆಯ ಕಲಾವಿದರು ನೃತ್ಯ ಪ್ರದರ್ಶಿಸಿದ್ದು ಆಕರ್ಷಕವಾಗಿತ್ತು. ಸೃಷ್ಟಿಯಲ್ಲಿ ಅಸಾಧ್ಯ ವಾದದ್ದು ಯಾವುದೂ ಇಲ್ಲ. ತಾನೇ ಮೇಲು ಎಂಬುದರಲ್ಲಿ ಅರ್ಥವಿಲ್ಲ ಎಂಬ ಸಂದೇಶ ಸಾರುವ ಶಿಶುನಾಳ ಶರೀಫರ `ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ…’ ತತ್ವಪದ ವನ್ನು ವಿಶಿಷ್ಟವಾಗಿ ಹಾಡಿ, ಸಂಚಲನ ಮೂಡಿಸಿದರು.

ಬಳಿಕ `ಲೋಕದ ಕಾಳಜಿ ಮಾಡತ್ತೀನಂತಿ ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ…’ ಹಾಡುವುದರ ಜೊತೆಗೆ ಪ್ರೇಕ್ಷಕರಿಂದಲೂ ಹಾಡಿಸಿದರು. ಗಾಯನ ಮೋಡಿ ಗೊಳ ಗಾಗಿ ತಮ್ಮ ಕಾಳಜಿಯನ್ನೇ ಕ್ಷಣಕಾಲ ಮರೆತ ಪ್ರೇಕ್ಷಕರು ತಾಳಬದ್ಧ ಚಪ್ಪಾಳೆಯೊಂದಿಗೆ `ಲೋಕದ ಕಾಳಜಿ…’ ಗುನುಗಿದರು.

`ಗುಡು ಗುಡಿಯಾ ಸೇದಿ ನೋಡೋ, ಒಡಲೊಳಗಿನ ರೋಗ ತೊರೆದು, ಮನಸೆಂಬ ಸಂಚಿಯ ಬಿಚ್ಚಿ, ದಿನ ದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ ನೆರವೆಂಬ ಚಿಲುಮೆಯ ಹಚ್ಚಿ, ಬುದ್ಧಿ ಅನುವಂಥ ಕೆಂಡವ ಮೇಲಲಿ ಮುಚ್ಚಿ ಗುಡು ಗುಡಿಯಾ ಸೇದಿ ನೋಡೋ…’ ಬದುಕಿನ ದಾರಿ ದೀಪದಂತಿರುವ ಶಿಶುನಾಳ ಶರೀಫರ ಈ ತತ್ವಪದ ರಘು ದೀಕ್ಷಿತ್ ಸಿರಿಕಂಠದ ಮೂಲಕ ನೆರೆದಿದ್ದವರ ಹೃದಯ ಮುಟ್ಟಿತು. ಹಾಡು ಕೇಳುತ್ತಲೇ ತಮ್ಮ ಮನದ ಗುಡಿಗಿಳಿದ ಪ್ರೇಕ್ಷಕರು ರಘು ದೀಕ್ಷಿತ್ ಗಾಯನಕ್ಕೆ ಅಂತರಂಗದ ಹಾರೈಕೆ ಸೂಚಿಸಿದರು.

ನನಗೆ ಭರತನಾಟ್ಯ ಕಲಿಸಿದ ಗುರು ನಂದಿನಿ ಈಶ್ವರ್ ಹಾಗೂ ನನ್ನ ತಾಯಿ ಇದೇ ಮೊದಲ ಬಾರಿಗೆ ಒಟ್ಟಿಗೆ ನನ್ನ ಸಂಗೀತ ಕಾರ್ಯಕ್ರಮ ನೋಡಲು ಬಂದಿದ್ದಾರೆ. ಪಾಶ್ಚಾತ್ಯ ಸಂಗೀತಕ್ಕೆ ಮಾರುಹೋಗುತ್ತಾನೆಂದು ಭೀತಿ ವ್ಯಕ್ತಪಡಿಸಿದ್ದ ನನ್ನ ಗುರುಗಳಿಗಾಗಿ ಒಂದು ರಾಕ್ ಸಾಂಗ್ ಅರ್ಪಿಸುತ್ತೇನೆ ಎಂದು `ಈ ತನುವು ನಿನ್ನದೇ, ನಿನ್ನಾಣೆ ಈ ಮನವೂ ಮನವು ನಿನ್ನದೇ ನಿನ್ನಾಣೆ…’ ಗೀತೆಯನ್ನು ಪ್ರಸ್ತುತಪಡಿ ಸಿದರು. ಹಾಡಿನ ನಡುವೆ 10 ನಿಮಿಷಕ್ಕೂ ಹೆಚ್ಚು ಸಮಯ ವಾದ್ಯಗಳ ಜುಗಲ್‍ಬಂದಿ ಸೃಷ್ಟಿಸಿ, ಕಲಾನೈಪುಣ್ಯತೆ ಪ್ರದ ರ್ಶಿಸಿದ್ದು ಎಲ್ಲರ ಮನಸೂರೆಗೊಂಡಿತು.

ನಮ್ಮ ಅಮ್ಮನಿಗೆ ಲವ್ ಅಂದ್ರೆ ಆಗಲ್ಲ. ಅದಕ್ಕಾಗಿ ಅವರಿ ಗೊಂದು ಲವ್ ಸಾಂಗ್ ಹಾಡುತ್ತೇನೆಂದು `ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ `ಎಲ್ಲಿಂದಲೋ ನೀ ಎದುರಿಗೆ ಬಂದೆ…’ ಹಾಡಿದರು. ಯದುವೀರ್ ಹಾಗೂ ಅವರ ಕುಟುಂಬ ದವರಿಗಾಗಿ ಅದೇ ಚಿತ್ರದ ಮತ್ತೊಂದು ಗೀತೆ `ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಂಪಲ್ಲಿ… ಕುಂತಲ್ಲೂ ನೀನೆ, ನಿಂತಲ್ಲೂ ನೀನೆ, ಸಖಿ ಆವರಿಸು..’ ಗೀತೆಯನ್ನು ಮನೋಜ್ಞ ವಾಗಿ ಹಾಡಿ, ಪ್ರೇಕ್ಷಕರಿಗೆ ಮುದ ನೀಡಿದರು.

ಮುಂದಿನ ತಿಂಗಳು ಬಿಡುಗಡೆಯಾಗೋ ಆಲ್ಬಂನಲ್ಲಿರುವ ಕಿರಣ್ ಕಾವೇರಪ್ಪ ರಚನೆಯ `ಅಲೆಮಾರಿ ನಾ ಅಲೆಮಾರಿ ತರಗಲೆಯ ಹಾಗೆ ಅಲೆವ ಅಲೆಮಾರಿ, ಅವನೆಡೆಗೆ ಸಾಗುವ ನಡೆಯೇ ನನ್ನ ದಾರಿ…’ ಗೀತೆಯನ್ನು ಮೊದಲ ಬಾರಿಗೆ ಅರ ಮನೆ ಆವರಣದ ವೇದಿಕೆಯಲ್ಲಿ ಹಾಡಿ, ಮೆಚ್ಚುಗೆ ಗಳಿಸಿದರು. `ಗಲ್ಲಿ ಬಾಯ್’ ಹಿಂದಿ ಚಿತ್ರದಲ್ಲಿ ಬಳಸಿಕೊಂಡಿರುವ ತಮ್ಮ `ಜೀವನ್ ಜೀವನ್ ದರಿಯಾ ದರಿಯಾ…’ ಹಾಡಿನೊಂದಿಗೆ `ಒಲವೇ ಜಾರಿ ಜಾರಿ ನಿನ್ನಾ ಸೇರೋ ಆಲೋಚನೆ…’ ಕನ್ನಡ ಸಾಲುಗಳ ಸಮ್ಮಿಳಿತಗೊಳಿಸಿ ಹಾಡಿ ರಂಜಿಸಿದರು.

23ನೇ ವಯಸ್ಸಿನಲ್ಲಿ ಮೈಸೂರಿನ ಸುಂದರ ಹುಡುಗಿ ಯನ್ನು ವರ್ಣಿಸಿ ಹಿಂದಿಯಲ್ಲಿ ಹಾಡು ಬರೆದಿದ್ದೆ. ನಂತರದಲ್ಲಿ ಮೈಸೂ ರನ್ನೇ ಹೆಣ್ಣಾಗಿ ಭಾವಿಸಿ ಹಾಡುತ್ತಿದ್ದೇನೆ ಎಂದು ತಿಳಿಸಿದ ರಘು ದೀಕ್ಷಿತ್, `ಮೈಸೂರ್ ಸೇ ಆಯಿ…’ ಗೀತೆ ಹಾಡಿದರು. ಈ ವೇಳೆ ಆಯಾನ ಕಲಾವಿದರು ಅತ್ಯಾಕರ್ಷಕ ನೃತ್ಯ ಪ್ರದರ್ಶಿ ಸಿದರು. ಬಹುಬೇಡಿಕೆಯ `ನಿನ್ನಾ ಪೂಜೆಗೆ ಬಂದೇ ಮಾದೇ ಶ್ವರ…’ ಹಾಡನ್ನು ಹಾಡಿ ನೆರೆದಿದ್ದವರನ್ನು ಕುಣಿಸಿದರು. ಕ್ಷಣಕಾಲವೂ ವಿರಾಮ ತೆಗೆದುಕೊಳ್ಳದೆ ಒಂದರ ಹಿಂದೊಂದು ವಿಶಿಷ್ಟ ಗೀತೆಗಳ ಪ್ರಸ್ತುತಪಡಿಸಿದ ಪರಿಗೆ ಎಲ್ಲರೂ ಫಿದಾ ಆದರು. ನವೀನ್, ಜಾನ್ ವಯೋಲಿನ್, ಅಕ್ಷಯ್ ಬೇಸ್ ಹಾಗೂ ಜೋ ಜೇಕಬ್ ಡ್ರಮ್ ವಾದ್ಯ ಸಹಕಾರ ನೀಡಿದರು. ಕನ್ನಡ ಬಾರದ 8 ಮಂದಿ ಗಾಯಕರು ಕನ್ನಡ ಹಾಡುಗಳನ್ನು ಕಲಿತು, ಕೋರಸ್ ನೀಡಿದ್ದು ವಿಶೇಷವಾಗಿತ್ತು.

Translate »