ಭವಿಷ್ಯದಲ್ಲಿ ಮೈಸೂರು ರೈಲು ನಿಲ್ದಾಣ ವಿಸ್ತರಣೆಗಾಗಿ ಪಕ್ಕದ ಕಾಂಗ್ರೆಸ್ ಭವನದ ಜಾಗಕ್ಕೆ ರೈಲ್ವೆ ಬೇಡಿಕೆ
ಮೈಸೂರು

ಭವಿಷ್ಯದಲ್ಲಿ ಮೈಸೂರು ರೈಲು ನಿಲ್ದಾಣ ವಿಸ್ತರಣೆಗಾಗಿ ಪಕ್ಕದ ಕಾಂಗ್ರೆಸ್ ಭವನದ ಜಾಗಕ್ಕೆ ರೈಲ್ವೆ ಬೇಡಿಕೆ

January 24, 2020

* ಹಿಂದಿನ ಡಿಆರ್‍ಎಂ ರಾಜಕುಮಾರ್ ಲಾಲ್‍ರಿಂದ ರೈಲ್ವೆ ಮಂಡಳಿಗೆ ಪತ್ರ * ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಕಳವಳ; ವಿರೋಧ
ಮೈಸೂರು, ಜ.23(ಆರ್‍ಕೆ)- ಭವಿಷ್ಯ ದಲ್ಲಿ ರೈಲ್ವೆ ನಿಲ್ದಾಣ ವಿಸ್ತರಿಸಿ ಪ್ರಯಾಣಿ ಕರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಕೊಡುವ ದೃಷ್ಟಿಯಿಂದ ಮೈಸೂರಿನ ಹೃದಯ ಭಾಗದಲ್ಲಿರುವ ಇಂದಿರಾ ಗಾಂಧಿ ಕಾಂಗ್ರೆಸ್ ಭವನವಿರುವ ಜಾಗಕ್ಕಾಗಿ ರೈಲ್ವೆ ಇಲಾಖೆ ಬೇಡಿಕೆ ಸಲ್ಲಿಸಿದೆ.

ನೈಋತ್ಯ ರೈಲ್ವೆ ವಿಭಾಗದ ಈ ಹಿಂದಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜ ಕುಮಾರ್ ಲಾಲ್, ಮೈಸೂರು ರೈಲು ನಿಲ್ದಾ ಣಕ್ಕೆ ಹೊಂದಿಕೊಂಡಿರುವ ದಾಸಪ್ಪ ಸರ್ಕಲ್‍ನ ಒಂದು ಬದಿ ಜೆಎಲ್‍ಬಿ ರಸ್ತೆಯಲ್ಲಿರುವ ಸುಮಾರು ಎರಡು ಎಕರೆ ವಿಸ್ತಾರದ ಕಾಂಗ್ರೆಸ್ ಕಚೇರಿಯ ಜಾಗವನ್ನು ರೈಲ್ವೆ ಇಲಾಖೆಗೆ ವಹಿಸಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಬೇಡಿಕೆ ಸಲ್ಲಿಸಿದ್ದರು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಮೈಸೂರು ಪ್ರಮುಖ ವಾಣಿಜ್ಯ ಕೇಂದ್ರವಾದ ಸಯ್ಯಾಜಿರಾವ್ ರಸ್ತೆಯ ದೇವರಾಜ ಮಾರು ಕಟ್ಟೆಯ ಪಾರಂಪರಿಕ ಕಟ್ಟಡದ ಪೂರ್ವ ಭಾಗದ ಒಂದು ದ್ವಾರದ ಮೊದಲನೇ ಮಹಡಿ ಯಲ್ಲಿದ್ದ ಕಾಂಗ್ರೆಸ್ ಕಚೇರಿ ಬಹಳ ಕಿಷ್ಕಿಂಧೆ ಯಂತಿದ್ದು, ವಾಹನ ನಿಲುಗಡೆಗೂ ಸ್ಥಳದ ಅಭಾವವಿತ್ತಲ್ಲದೆ, ಕಟ್ಟಡ ಶಿಥಿಲವಾಗಿತ್ತು. ಅಲ್ಲದೆ ಸಾಕಷ್ಟು ಸಮಸ್ಯೆ ಎದುರಾದ ಹಿನ್ನೆಲೆ ಯಲ್ಲಿ ಮೈಸೂರು ಮಹಾನಗರ ಪಾಲಿ ಕೆಯು ಬಾಡಿಗೆಗೆ ನೀಡಿದ್ದ ಈ ಕೊಠಡಿ ಯನ್ನು ತೆರವುಗೊಳಿಸಿತ್ತು.

ತದನಂತರ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂ ತಿರುವ ಸಿಐಟಿಬಿಯಿಂದ 99 ವರ್ಷಗಳ ಅವ ಧಿಗೆ ಗುತ್ತಿಗೆ ನೀಡಲಾಗಿದ್ದ 2 ಎಕರೆ ಜಾಗಕ್ಕೆ ಸ್ಥಳಾಂತರಿಸಿ, ಅಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನ ಎಂದು ಹೆಸರಿಸಿ, ಕಟ್ಟಡ ಕೂಡ ನಿರ್ಮಿಸಿ ಪ್ರಸ್ತುತ ಕಚೇರಿ ನಡೆಯುತ್ತಿದೆ.

1965ರಲ್ಲಿ ಹೆಚ್.ಕೆಂಪೇಗೌಡರು ನಗರ ಅಭಿವೃದ್ಧಿ ವಿಸ್ವಸ್ಥ ಮಂಡಳಿ (ಸಿಐಟಿಬಿ) ಅಧ್ಯಕ್ಷರಾಗಿದ್ದಾಗ ಸದರಿ 2 ಎಕರೆ ಜಾಗ ವನ್ನು ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಕಚೇರಿಗೆಂದು 99 ವರ್ಷಗಳ ಅವಧಿಗೆ ಲೀಸ್ ಅಗ್ರಿಮೆಂಟ್ ಮಾಡಿ ಮಂಜೂರು ಮಾಡಿದ್ದರು. ಇನ್ನೂ 45 ವರ್ಷ ಅವಧಿ ಬಾಕಿ ಇರು ವಾಗಲೇ ರೈಲ್ವೆ ಇಲಾಖೆ ಈ ಪ್ರಧಾನ ಜಾಗ ವನ್ನು ಮೈಸೂರು ರೈಲು ನಿಲ್ದಾಣದ ವಿಸ್ತರಣೆ ಗಾಗಿ ಕೋರಿರುವುದು ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಆತಂಕಕ್ಕೆ ಕಾರಣವಾಗಿದೆ.

ಅಲ್ಲದೆ 6 ಕೋಟಿ ರೂ. ಅಂದಾಜು ವೆಚ್ಚ ದಲ್ಲಿ ಸಭಾಂಗಣ, ಕಚೇರಿಯ ವಿವಿಧ ಘಟಕ ಗಳಿಗೆ ಪ್ರತ್ಯೇಕ ಕೊಠಡಿ, ಗೆಸ್ಟ್ ಹೌಸ್ ನಿರ್ಮಿಸಲು ಉದ್ದೇಶಿಸಿರುವ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಈಗಾಗಲೇ ನಕ್ಷೆ ಅನುಮೋದನೆಗಾಗಿ ಮೈಸೂರು ಮಹಾ ನಗರ ಪಾಲಿಕೆ ಕಚೇರಿಗೆ ಅರ್ಜಿ ಸಲ್ಲಿಸಿ 5 ಲಕ್ಷ ರೂ. ಶುಲ್ಕವನ್ನೂ ಪಾವತಿಸಿದೆ.

ಮೈಸೂರಿಂದ ಪ್ರತೀದಿನ 45 ರೈಲುಗಳು ವಿವಿಧೆಡೆ ಸಂಚರಿಸುತ್ತಿರುವುದರಿಂದ ಪ್ರಯಾ ಣಿಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಅಧಿಕ ವಾಗಿದೆ. ಪ್ಲಾಟ್‍ಫಾರಂ, ಕಚೇರಿ ಮತ್ತು ವಾಹನ ನಿಲುಗಡೆಗೆ ಮೈಸೂರು ರೈಲು ನಿಲ್ದಾಣವನ್ನು ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದು ಹಿಂದಿನ ಡಿಆರ್‍ಎಂ ರಾಜಕುಮಾರ್ ಲಾಲ್ ರೈಲ್ವೆ ಮಂಡಳಿಗೆ ಪತ್ರ ಬರೆದು, ಹಾಲಿ ಸ್ಥಿತಿಗತಿ ವಿವರ ನೀಡಿದ್ದರೆಂದು ಮೂಲಗಳು ತಿಳಿಸಿವೆ.

ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತಿ ರುವ ಕಾಂಗ್ರೆಸ್ ಕಚೇರಿ ಜಾಗವನ್ನು ನೀಡಿದರೆ ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ ಅಂಡರ್‍ಪಾಸ್ ಮೂಲಕ ಪ್ರಯಾಣಿಕರು ರೈಲು ನಿಲ್ದಾಣದ ಪ್ಲಾಟ್‍ಫಾರಂಗಳಿಗೆ ಹೋಗಲು ಅನುಕೂಲ ಮಾಡಿಕೊಡಬಹುದು ಎಂಬ ಅಭಿ ಪ್ರಾಯವನ್ನೂ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಅದೇ ರೀತಿ ಕೆಆರ್‍ಎಸ್ ರಸ್ತೆಯ ಸಿಎಫ್ ಟಿಆರ್‍ಐ ಎದುರಿನ ರೈಲ್ವೆ ಮ್ಯೂಸಿಯಂ ಪಕ್ಕದಲ್ಲಿರುವ ಖಾಲಿ ಜಾಗದಲ್ಲೂ ವಾಹನ ನಿಲುಗಡೆ ಮಾಡಬಹುದಾಗಿದ್ದು, ಅದಕ್ಕೂ ಅನುಮೋದನೆ ಕೇಳಿದ್ದ ರಾಜಕುಮಾರ್ ಲಾಲ್, ದಿನದಿಂದ ದಿನಕ್ಕೆ ರೈಲು ಬಳಕೆ ದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂದೆ ನಿಲ್ದಾಣವನ್ನು ವಿಸ್ತರಿಸುವುದು ಅನಿವಾರ್ಯ ವಾಗುತ್ತದೆ ಎಂದು ಅಭಿಪ್ರಾಯಿಸಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಗಳಲ್ಲೂ ಹಲವು ಬಾರಿ ಚರ್ಚೆ ಯಾಗಿದ್ದು, ಸಮಿತಿ ಸದಸ್ಯರೊಬ್ಬರು ಕಾಂಗ್ರೆಸ್ ಕಚೇರಿ ಇರುವ ಜಾಗವನ್ನು ರೈಲ್ವೆ ಇಲಾಖೆಗೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆ ದಿದ್ದರು ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಪ್ರಮುಖ ಸಭೆಯೊಂದರಲ್ಲಿ ಭಾಗವಹಿ ಸಲು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಹುಬ್ಬಳ್ಳಿಗೆ ಹೋಗಿರುವುದರಿಂದ ಜಾಗ ಕೋರಿ ರುವ ಕುರಿತಂತೆ ಪ್ರತಿಕ್ರಿಯೆಗೆ ಮೈಸೂರು ರೈಲು ನಿಲ್ದಾಣದ ಕಚೇರಿಯ ಯಾವ ಜವಾ ಬ್ದಾರಿಯುತ ಅಧಿಕಾರಿಗಳು ಲಭ್ಯವಾಗಲಿಲ್ಲ.

 

ಬೆಳೆಯುತ್ತಿರುವ ಮೈಸೂರು ನಗರದ ದೃಷ್ಟಿಯಿಂದ ರೈಲು ನಿಲ್ದಾಣದ ವಿಸ್ತರ ಣೆಗೆ ಪಕ್ಕದಲ್ಲಿರುವ ಕಾಂಗ್ರೆಸ್ ಭವನದ ಜಾಗದ ಅಗತ್ಯವಿದೆ ಎಂದು ಈ ಹಿಂದಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜ ಕುಮಾರ್ ಲಾಲ್, ರೈಲ್ವೇ ಮಂಡಳಿ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಂತರ ಆ ಪ್ರಸ್ತಾವನೆ ಯಾವ ಹಂತದಲ್ಲಿದೆ ಎಂಬುದನ್ನು ಪ್ರಸ್ತುತ ಡಿಆರ್‍ಎಂ ಅವರನ್ನೇ ಕೇಳಬೇಕು. ಈಗ ನನಗೆ ಕ್ಷೇತ್ರದ ಬೇರೆ ಬೇರೆ ಕೆಲಸವಿರುವುದರಿಂದ ಇನ್ನೂ ಎರಡು ತಿಂಗಳು ಆ ಬಗ್ಗೆ ಗಮನ ಹರಿಸಲಾಗದು. ನಂತರ ಗಮನ ಹರಿಸುತ್ತೇನೆ. – ಪ್ರತಾಪ್‍ಸಿಂಹ, ಸಂಸದ

ಇಂದಿರಾಗಾಂಧಿ ಕಾಂಗ್ರೆಸ್ ಭವನವಿರುವ ಜಾಗವನ್ನು ಸಿಐಟಿಬಿಯಿಂದ ಲೀಸ್‍ಗೆ ನೀಡಲಾಗಿದೆ. ಈಗ ಸದರಿ ಜಾಗ ಪಾಲಿಕೆ ವಶದಲ್ಲಿದೆ. ರೈಲ್ವೇ ನಿಲ್ದಾಣ ವಿಸ್ತರಣೆಗೆ ಆ ಜಾಗವನ್ನು ಬಿಟ್ಟು ಕೊಡಬೇಕೆಂಬ ಯಾವುದೇ ಪತ್ರ ನಮ್ಮ ಕಚೇರಿಗೆ ಬಂದಿರುವುದು ನನ್ನ ಗಮನಕ್ಕೆ ಬಂದಿಲ್ಲ. ರೈಲ್ವೇ ಬೋರ್ಡ್ ನಿಂದಾಗಲೀ, ರಾಜ್ಯ ಸರ್ಕಾರದಿಂದಾಗಲೀ ಮುಡಾಗೆ ಯಾವ ಸಂದೇಶವೂ ಬಂದಿಲ್ಲ. -ಪಿ.ಎಸ್.ಕಾಂತರಾಜು, ಮುಡಾ ಆಯುಕ್ತ

ಹಾಲಿ ಕಾಂಗ್ರೆಸ್ ಭವನದ ಜಾಗಬೇಕೆಂದು ರೈಲ್ವೇಯವರು ನಮ್ಮನ್ನು ಕೇಳಿಲ್ಲ, ರಾಜ್ಯ ಸರ್ಕಾರದಿಂದಲೂ ಆ ಬಗ್ಗೆ ಯಾವ ಮಾಹಿತಿಯೂ ಬಂದಿಲ್ಲ. 1965ರಲ್ಲಿ ಹೆಚ್. ಕೆಂಪೇಗೌಡರು ಸಿಐಟಿಬಿ ಛೇರ್ಮನ್ ಆಗಿದ್ದಾಗ ಈ ಜಾಗವನ್ನು 99 ವರ್ಷಕ್ಕೆ ಲೀಸ್‍ಗೆ ನೀಡಲಾಗಿದೆ. ಈಗ 6 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಾವು ಕಟ್ಟಡ ನಿರ್ಮಿಸಲು ನಕ್ಷೆ ಅನುಮೋದನೆಗೆ ಪಾಲಿಕೆಗೆ ಅರ್ಜಿ ಸಲ್ಲಿಸಿ 5 ಲಕ್ಷ ರೂ. ಶುಲ್ಕವನ್ನೂ ಪಾವತಿಸಿದ್ದೇವೆ. ನಾವು ಇನ್ನೂ ಲೀಸ್ ಪಿರಿಯೆಡ್ ನಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಈ ಜಾಗ ತೆರವುಗೊಳಿಸಲಾಗದು. ನಿಲ್ದಾಣ ವಿಸ್ತರಿಸಲು ಎಟುಬಿ ಹೋಟೆಲ್ ಹಾಗೂ ಪೂರ್ವಭಾಗದಲ್ಲಿರುವ ಜಾಗವನ್ನು ರೈಲ್ವೇ ಇಲಾಖೆಯವರು ಬಳಸಿಕೊಳ್ಳಬಹುದಲ್ಲ. ಈ ಜಾಗವೇ ಏಕೆ ಬೇಕು. -ಆರ್.ಮೂರ್ತಿ, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ

Translate »