ರೈಲ್ವೆ ನೌಕರರ ಸಂಘ ಪ್ರತಿಭಟನೆ
ಮೈಸೂರು

ರೈಲ್ವೆ ನೌಕರರ ಸಂಘ ಪ್ರತಿಭಟನೆ

March 10, 2019

ಮೈಸೂರು: ಸಂವಿಧಾನದ 117ನೇ ತಿದ್ದುಪಡಿ ವಿಧೇಯಕ ಅಂಗೀ ಕರಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ನೈರುತ್ಯ ರೈಲ್ವೆಯ ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪಂಗಡ ರೈಲ್ವೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನೈರುತ್ಯ ರೈಲ್ವೆಯ ವಿಭಾಗೀಯ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಎಸ್‍ಸಿ-ಎಸ್‍ಟಿ ನೌಕರರ ಹಿತಕಾಯುವ ದೃಷ್ಟಿಯಲ್ಲಿ 117ನೇ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲು ಕೇಂದ್ರ ಸರ್ಕಾರ ಮುಂದಾ ಗಬೇಕು ಎಂದು ಒತ್ತಾಯಿಸಿದರು. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಸೌಲಭ್ಯದಿಂದ ಎಸ್‍ಸಿ-ಎಸ್‍ಟಿ ನೌಕರರು ಉದ್ಯೋಗದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು. ರೈಲ್ವೆ ಸಚಿವಾಲಯ ಇಲಾಖೆಯಲ್ಲಿ 13 ಪಾಯಿಂಟ್ ರೋಸ್ಟರ್ ಪದ್ಧತಿ ಜಾರಿಗೆ ಉದ್ದೇಶಿಸಿದ್ದು, ಯಾವುದೇ ಕಾರಣಕ್ಕೂ ಇದನ್ನು ಜಾರಿಗೊಳಿಸದೇ ಹಿಂದಿನ 14 ಪಾಯಿಂಟ್ ರೋಸ್ಟರ್ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನೀಡಿರುವ 13 ಪಾಯಿಂಟ್ ರೋಸ್ಟರ್ ಪದ್ಧತಿಗೆ ಅವಕಾಶ ನೀಡದೇ ಈ ಸಂಬಂಧ ಸಂವಿಧಾನಿಕ ತಿದ್ದುಪಡಿ ತರಬೇಕು. ನ್ಯಾಯಾಂಗ ವ್ಯವಸ್ಥೆ ಹಾಗೂ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು. ಎನ್‍ಪಿಎಸ್ ಪಿಂಚಣಿ ಯೋಜನೆ ಕೈಬಿಟ್ಟು ಹಳೇ ಪಿಂಚಣಿ ಯೋಜನೆ ಮುಂದುವರೆಸ ಬೇಕು ಎಂದು ಒತ್ತಾಯಿಸಿದರು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಪ್ರತಿಭಟನೆ ನಡೆಸಿ ಎಡಿಆರ್‍ಎಂ ಸಿನ್ಹಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ವಿಭಾಗೀಯ ಅಧ್ಯಕ್ಷ ವಿ.ನಂದಕುಮಾರ್, ವಿಭಾಗೀಯ ಕಾರ್ಯದರ್ಶಿ ಎಂ.ಮೋಹನ್, ನೌಕರರಾದ ರಾಜ್ ಕುಮಾರ್, ಅನಂತು ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಶೋಕಪುರಂ ರೈಲ್ವೆ ಕಾರ್ಯಾಗಾರ: ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂ ರಿನ ಅಶೋಕಪುರಂ ರೈಲ್ವೆ ಕಾರ್ಯಾಗಾರದ ಆವರಣದಲ್ಲೂ ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ವರ್ಗ ರೈಲ್ವೆ ನೌಕರರ ಸಂಘದ ವತಿಯಿಂದ ಮಧ್ಯಾಹ್ನ ಸುಮಾರು 2ರಿಂದ 3 ಗಂಟೆಯವರೆಗೆ ಪ್ರತಿಭಟನೆ ನಡೆಸಲಾಯಿತು.

Translate »