ಮಳೆ ಹಾನಿ: ಹಾನುಬಾಳು ಹೋಬಳಿ ಸುತ್ತಮುತ್ತ ಶಾಸಕರಿಂದ ಪರಿಶೀಲನೆ
ಹಾಸನ

ಮಳೆ ಹಾನಿ: ಹಾನುಬಾಳು ಹೋಬಳಿ ಸುತ್ತಮುತ್ತ ಶಾಸಕರಿಂದ ಪರಿಶೀಲನೆ

June 20, 2018

ಹಾಸನ: ಸಕಲೇಶಪುರ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಹಾನಿಗೀಡಾಗಿರುವ ಹಾನುಬಾಳು ಹೋಬಳಿಯ ಹುರುಡಿ, ಅಚ್ಚರಡಿ, ದೇವಾಲಕೆರೆ, ಬೆಟ್ಟದ ಭೈರೇಶ್ವರ ಮತ್ತಿತರ ಪ್ರದೇಶಗಳಿಗೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿ, ಪರಿಶೀಲಿಸಿದರು.

ಹಾನಿಗೀಡಾಗಿರುವ ರಸ್ತೆ ಸೇತುವೆಗಳನ್ನು ಪರಿಶೀಲಿಸಿ ಕೂಡಲೇ ಪರಿಹಾರ ಕ್ರಮ ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಕಲೇಶಪುರ ತಹಶೀಲ್ದಾರು, ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಜರಿದ್ದರು.

ಪರಿಹಾರ ಚೆಕ್ ವಿತರಣೆ: ಹಾಸನ ತಾಲೂಕು ಕಟ್ಟಾಯ ಹೋಬಳಿ ಕಾರ್ಲೆ ಮತ್ತು ಪದುಮನಹಳ್ಳಿ ಗ್ರಾಮಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಇಬ್ಬರು ರೈತರ ಕುಟುಂಬದ ಸದಸ್ಯರಿಗೆ ಆಲೂರು-ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಲಾ 5 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಕಾರ್ಲೇ ಗ್ರಾಮದ ಶೋಭಾ ಹಾಗೂ ಪದಮನಹಳ್ಳಿ ಕೃಷ್ಣೇಗೌಡ ಅವರ ಕುಟುಂಬಕ್ಕೂ ಪರಿಹಾರ ಧನದ ಚೆಕ್ ವಿತರಿಸಲಾಯಿತು.

Translate »