ಮದುವೆ ನಿಲ್ಲಿಸಿದ ವಾಟ್ಸಪ್! ನಿಶ್ಚಯಿಸಿದ್ದ ಮದುವೆ ಮುರಿದು ಬಿತ್ತು… ಪ್ರೇಮಿಗಳು ವಿವಾಹವಾದರು
ಮೈಸೂರು

ಮದುವೆ ನಿಲ್ಲಿಸಿದ ವಾಟ್ಸಪ್! ನಿಶ್ಚಯಿಸಿದ್ದ ಮದುವೆ ಮುರಿದು ಬಿತ್ತು… ಪ್ರೇಮಿಗಳು ವಿವಾಹವಾದರು

December 1, 2018

ಸಕಲೇಶಪುರ: ವಾಟ್ಸಪ್ ಸಂದೇಶದಿಂದ ಮದುವೆಯೊಂದು ಮುರಿದು ಬಿದ್ದಿದ್ದು, ವಧುವಿನ ಜೊತೆ ಇದ್ದ ಫೋಟೋಗಳನ್ನು ವರನಿಗೆ ವಾಟ್ಸಪ್ ಮಾಡಿದ್ದ ಪ್ರಿಯಕರನೇ ಆಕೆಯನ್ನು ಮದುವೆಯಾದ ಘಟನೆ ಸಕಲೇಶಪುರದ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದ ಶ್ರುತಿ ಮತ್ತು ಬೈಕೆರೆ ಗ್ರಾಮದ ಯೋಧ ತಾರೇಶ್ ವಿವಾಹ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿತ್ತು. ಮಾಂಗಲ್ಯ ಧಾರಣೆಗೆ ಕೆಲ ಗಂಟೆಗಳ ಮುನ್ನ ಮಧುಮಗ ತಾರೇಶ್ ಮೊಬೈಲ್‍ಗೆ ವಾಟ್ಸಪ್ ಸಂದೇಶ ಬಂದಿದೆ. ಅದರಲ್ಲಿ ಕೆಲವೇ ಗಂಟೆಗಳಲ್ಲಿ ತಾನು ವಿವಾಹವಾಗಬೇಕಾಗಿದ್ದ ವಧು ಬೇರೊಬ್ಬ ಯುವಕನ ಜೊತೆ ಇರುವ ಫೋಟೋಗಳು ಕಳುಹಿಸಲಾಗಿತ್ತು.

ಅದನ್ನು ಕಂಡ ತಾರೇಶ್, ವಧುವಿಗೆ ಬೇರೆ ಯುವಕನ ಜೊತೆ ಸಂಬಂಧವಿದೆ. ಆದ್ದರಿಂದ ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಕಲ್ಯಾಣ ಮಂಟಪದಿಂದ ಹೊರ ಹೋಗಲು ಸಿದ್ಧನಾದ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಆಗಮಿಸಿದರು. ಆಗ ಠಾಣೆಗೆ ಬಂದ ಪ್ರಿಯಕರ ಅಭಿಷೇಕ್ ತಾನೇ ಶ್ರುತಿಯನ್ನು ವಿವಾಹವಾಗುವುದಾಗಿ ತಿಳಿಸಿದ್ದಾನೆ. ಕೊನೆಗೆ ನಿಶ್ಚಯವಾಗಿದ್ದ ಮುಹೂರ್ತದಲ್ಲೇ ಅಭಿಷೇಕ್ ಮತ್ತು ಶ್ರುತಿ ವಿವಾಹ ನೆರವೇರಿದೆ.

ವಧು ಶ್ರುತಿ ಮತ್ತು ಪ್ರಿಯಕರ ಅಭಿಷೇಕ್ ಪೂರ್ವ ನಿಯೋಜಿತವಾಗಿ ಮದುವೆ ನಿಲ್ಲಿಸಿದ್ದಾರೆ ಎಂದು ಮಧುಮಗ ತಾರೇಶ್‍ನ ಕುಟುಂಬಸ್ಥರು ಆರೋಪಿಸಿದ್ದಾರೆ. ತಾನು ಅಭಿಷೇಕ್‍ನನ್ನು ವಿವಾಹವಾಗುವ ಉದ್ದೇಶವಿದ್ದರೆ ಮೊದಲೇ ತಿಳಿಸಬೇಕಾಗಿತ್ತು. ಅದನ್ನು ಬಿಟ್ಟು ತಾಳಿ ಕಟ್ಟಲು 2 ಗಂಟೆ ಸಮಯವಿದ್ದಾಗ ಅಭಿಷೇಕ್ ಮೂಲಕ ಫೋಟೋಗಳನ್ನು ವಾಟ್ಸಪ್ ಮಾಡಿಸಿ ಮದುವೆ ನಿಲ್ಲಿಸಿದ್ದಾರೆ.

ಫೋಟೋಗಳನ್ನು ನೋಡಿದ ತಕ್ಷಣವೇ ತಾರೇಶ್, ಆಕೆಯನ್ನು ಮದುವೆ ಯಾಗುವುದಿಲ್ಲ ಎಂದು ಹಠ ಹಿಡಿದಿದ್ದ. ಅದೇ ವೇಳೆಗೆ ಮದುವೆ ಮಂಟಪಕ್ಕೆ ಅಭಿಷೇಕ್ ಕೂಡ ಬಂದಿದ್ದು, ನಂತರ ಪೊಲೀಸ್ ಠಾಣೆಗೆ ಆಗಮಿಸಿ ಆಕೆಯನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ.

Translate »