ಮಂಡ್ಯ, ಮೈಸೂರು, ಚಾ.ನಗರ, ಹಾಸನದಲ್ಲಿ ಮಳೆ ಆರ್ಭಟ
ಮೈಸೂರು

ಮಂಡ್ಯ, ಮೈಸೂರು, ಚಾ.ನಗರ, ಹಾಸನದಲ್ಲಿ ಮಳೆ ಆರ್ಭಟ

October 23, 2019

ಮೈಸೂರು, ಅ.22- ಮೈಸೂರು, ಮಂಡ್ಯ, ಚಾಮ ರಾಜನಗರ ಹಾಗೂ ಹಾಸನದಲ್ಲಿ ವರುಣನ ಆರ್ಭಟ ಮುಂದುವರೆ ದಿದ್ದು, ಮಂಡ್ಯದ ಕೆ.ಆರ್.ಪೇಟೆ ಯಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅನೇಕ ಮನೆಗಳಿಗೆ ಭಾರೀ ಹಾನಿಯಾಗಿದೆ. ಅಪಾರ ಪ್ರಮಾ ಣದ ಬೆಳೆ ನಷ್ಟವಾಗಿ ರೈತರು ಕಂಗಾ ಲಾಗಿದ್ದಾರೆ. ಕೆರೆಕಟ್ಟೆಗಳು ಕೋಡಿ ಬೀಳುವ ಸ್ಥಿತಿಗೆ ತಲುಪಿವೆ. ಒಟ್ಟಾರೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗಿನಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಮೈಸೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಮೈಸೂರಿನ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಸಮೀಪ, ಭೂ ಕುಸಿತ ಉಂಟಾಗಿದೆ. ಪರಿಣಾಮ ನಂದಿ ವಿಗ್ರಹ ಮಾರ್ಗದ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಗರದ ಸುಣ್ಣದಕೇರಿ 17ನೇ ಕ್ರಾಸ್‍ನಲ್ಲಿರುವ ಶಿವಪ್ರಸಾದ ಎಂಬುವರ ಹಳೇ ಮನೆಯ ಗೋಡೆ ಕುಸಿದು, ಅಪಾರ ಪ್ರಮಾಣದ ನಷ್ಟವಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯ ಸಂಭವಿ ಸಿಲ್ಲ. ಉಳಿದಂತೆ ಗೋಕುಲಂ, ಕುಂಬಾರಕೊಪ್ಪಲು, ಲೋಕನಾಯಕನಗರ, ಬಿಎಂಶ್ರೀ ನಗರ, ಚಾಮುಂಡಿ ಪುರಂ, ಬನ್ನಿಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ದೊಡ್ಡ ಮೋರಿಗಳಲ್ಲಿ ನೀರು ತುಂಬಿ ಹರಿದಿದೆ. ತಗ್ಗು ಪ್ರದೇಶದ ಜನವಸತಿ ಸ್ಥಳಗಳಿಗೆ ನೀರು ನುಗ್ಗಿ ಜನ ಜೀವನಕ್ಕೆ ತೀವ್ರ ತೊಂದರೆಯಾಗಿದೆ. ಗಾಯತ್ರಿಪುರಂ, ಬೀಡಿ ಕಾಲೋನಿ, ಉದಯಗಿರಿ, ಅಜೀಜ್‍ಸೇಠ್‍ನಗರ, ರಾಜೀವ್‍ನಗರ, ಭಾರತನಗರ, ಕಾಮನಕೆರೆಹುಂಡಿ ಬಳಿಯ ಅಮೃತ ಬಡಾವಣೆ ಹಾಗೂ ಏಕಲವ್ಯನಗರಗಳಲ್ಲಿನ ಗುಡಿಸಲು ನಿವಾಸಿಗಳು ಹಾಗೂ ನರ್ಮ್‍ನಡಿ ನಿರ್ಮಿ ಸಿರುವ ಗುಂಪು ಮನೆಗಳ ಬಳಿಯೂ ಕೆರೆ ಮಾದರಿ ನೀರು ನಿಂತು ಜನರು ಪರದಾಡುವಂತಾಗಿದೆ.

ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಗ್ಯಾಂಗ್‍ಮನ್‍ಗಳು ಸಲಕರಣೆಯೊಂದಿಗೆ ಕಾರ್ಯಾ ಚರಣೆ ನಡೆಸಿ ದೊಡ್ಡ ಮೋರಿಗಳಲ್ಲಿ, ಮ್ಯಾನ್‍ಹೋಲ್ ಗಳಲ್ಲಿ ತುಂಬಿ ಹರಿಯುವ ನೀರನ್ನು ಡೈವರ್ಟ್ ಮಾಡಿ ದ್ದಾರೆ. ಅರಣ್ಯಾಧಿಕಾರಿಗಳು, ಸೆಸ್ಕ್ ಸಿಬ್ಬಂದಿ ಸಹ ಪರಿಶೀಲನೆ ನಡೆಸಿ, ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳ ತೆರವು ಮಾಡುವಲ್ಲಿ ನಿರತರಾಗಿದ್ದರಲ್ಲದೆ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಿಬ್ಬಂದಿಗಳು ಸಹ ಎಚ್ಚರದಿಂದಿದ್ದು, ಜಿಲ್ಲಾ ಕಂಟ್ರೋಲ್ ರೂಂಗೆ ಬರುವ ಮಳೆ ಅವಾಂತರ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ. ಸೋಮವಾರ ಮೈಸೂರಲ್ಲಿ 18.6 ಮಿಮೀ, ತಿ.ನರಸೀಪುರ 23.8 ಮಿಮೀ, ಕೆ.ಆರ್.ನಗರ 24.9 ಮಿಮೀ, ಹೆಚ್.ಡಿ.ಕೋಟೆ 8.8 ಮಿಮೀ, ಪಿರಿಯಾಪಟ್ಟಣ 18 ಮಿಮೀ, ನಂಜನಗೂಡು 5.2 ಮಿಮೀ ಹಾಗೂ ಹುಣಸೂರಿನಲ್ಲಿ 14 ಮಿಮೀ ಮಳೆಯಾಗಿದೆ. ಕಬಿನಿ ಜಲಾಶಯದಲ್ಲಿ 83.96 ಅಡಿ ನೀರು ಸಂಗ್ರಹವಿದ್ದು, 5,273 ಕ್ಯೂಸೆಕ್ಸ್ ಒಳಹರಿವು, 4750 ಕ್ಯೂಸೆಕ್ಸ್ ಹೊರ ಹರಿವಿದೆ ಎಂದು ಮೈಸೂರು ಜಿಲ್ಲಾ ಕಂಟ್ರೋಲ್ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮಂಡ್ಯದಲ್ಲಿ ಜೀವಹಾನಿ: ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಕುಮಾರ್(45) ಎಂಬುವರು ಅಸುನೀಗಿದ್ದಾರೆ. ಮುರುಕನಹಳ್ಳಿಯ ನಂಜಯ್ಯ ಮತ್ತು ನರಸಮ್ಮ ದಂಪತಿಯ ಪುತ್ರ ಕುಮಾರ್, ಗಂಜಿಗೆರೆಯ ತಮ್ಮ ಅಜ್ಜಿಯ ಮನೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಸಾರಂಗಿ ಗ್ರಾಮದ ಬಳಿ ಹೇಮಾವತಿ ನಾಲೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಚಾರ ನಿರ್ಬಂಧಿಸಲಾಗಿದೆ. ಮುರುಕನಹಳ್ಳಿ ತೊರೆಯಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಕೆ.ಆರ್.ಪೇಟೆ-ಶೀಳನೆರೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಿರಳಹಳ್ಳಿ ಸೇತುವೆ ಮುಳುಗಡೆಯಾಗಿದೆ. ಹೊಸಹೊಳಲು ಗ್ರಾಮದ ಎಸ್‍ಎಲ್‍ಎನ್ ಟೆಂಪಲ್ ರಸ್ತೆಯಲ್ಲಿರುವ ಪದ್ಮಮ್ಮ ಶ್ರೀಕಂಠಚಾರಿ ಮನೆ ಕುಸಿಯುವ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ದೇವರು ಕಾಪನಹಳ್ಳಿ ಗವಿಮಠವೂ ಜಲಾವೃತವಾಗಿದೆ.

ಮಂಡ್ಯ ತಾಲೂಕಿನಲ್ಲಿ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಗುತ್ತಲು ಅರ್ಕೇಶ್ವರ ಸ್ವಾಮಿ ದೇವಾಲಯದ ಸಮೀಪ ಸೇತುವೆ ಮೇಲೆ 2 ಅಡಿಗಳಷ್ಟು ನೀರು ಹರಿಯುತ್ತಿದೆ. ಪರಿಣಾಮ ಗುತ್ತಲು ಹಾಗೂ ಮರಕಾಡುದೊಡ್ಡಿ ನಡುವಿನ ಸಂಪರ್ಕ ಕಡಿತವಾಗಿದೆ. ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ಎಂ.ಪಿ.ಅಮರ್ ಬಾಬು ಮನೆಗೆ ನೀರು ನುಗ್ಗಿ ಗೃಯೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ಅಹಮದ್ ಅವರ ಗುಡಿಸಲು ಬಿದ್ದು ಹೋಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಲೋಕಪಾವನಿ ನದಿ ಬಳಿ ಜಲಾವೃತವಾಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ನಾಗಮಂಗಲ ತಾಲೂಕು ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮವಾದ ಗಿಡುವಿನ ಹೊಸಹಳ್ಳಿ, ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಬಳಿ ಮುಖ್ಯ ರಸ್ತೆಗಳು ಕೊಚ್ಚಿ ಹೋಗಿವೆ. ಸೋಮವಾರ ಮಂಡ್ಯ ಜಿಲ್ಲೆಯಲ್ಲಿ 43.01 ಮಿಮೀ ಮಳೆಯಾಗಿದ್ದು, ಮಂಡ್ಯ, ಮದ್ದೂರು, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮಳೆ ಮುಂದುವರೆದಿದೆ.

ಚಾಮರಾಜನಗರ: ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಮಳೆ ಮೂರ್ನಾಲ್ಕು ದಿನಗಳಿಂದ ಮತ್ತಷು ಬಿರುಸಾಗಿದೆ. ಪರಿಣಾಮ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು, ಸಣ್ಣ-ಪುಟ್ಟ ಕೆರೆ ಕಟ್ಟೆಗಳು ಭರ್ತಿ ಆಗುವ ಹಂತದಲ್ಲಿವೆ. ಸೋಮವಾರ ರಾತ್ರಿ ಬಿದ್ದ ಭಾರೀ ಮಳೆಗೆ ಮಹದೇಶ್ವರ ಬೆಟ್ಟದಿಂದ ಪಾಲಾರ್‍ಗೆ ತೆರಳುವ ಮಾರ್ಗ ಮಧ್ಯೆ ರಸ್ತೆ ಕುಸಿದು, ಸಂಚಾರಕ್ಕೆ ಅಡ್ಡಿಯಾಗಿದೆ. ತಮ್ಮಡಹಳ್ಳಿ ಗ್ರಾಮದ ರೈತರೊಬ್ಬರ ಟೊಮಾಟೊ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿದೆ. ಹತ್ತಾರು ಮನೆಗಳೂ ಕುಸಿಯುವ ಸ್ಥಿತಿ ತಲುಪಿವೆ. ಸೋಮವಾರ ಜಿಲ್ಲೆಯಲ್ಲಿ 29 ಮಿಲಿ ಮೀಟರ್ ಸೇರಿ ಅ.17ರಿಂದ ಈವರೆಗೆ ಒಟ್ಟು 78 ಮಿಮೀ ಮಳೆ ಆಗಿದ್ದು, ಶೇ.61ರಷ್ಟು ಹೆಚ್ಚಾಗಿದೆ. ಜೋಳಕ್ಕೆ ಪೋಷಣೆ ನೀಡಿರುವ ಮಳೆರಾಯ ಅರಿಶಿಣ, ತರಕಾರಿ, ಕೊತ್ತಂಬರಿ, ಹಸಿಕಡ್ಲೆ ಇನ್ನಿತರ ಬೆಳೆಯನ್ನು ಮಣ್ಣು ಪಾಲು ಮಾಡುತ್ತಿದ್ದಾನೆ. ಅನವೃಷ್ಟಿಯಿಂದ ಬೆಂದಿದ್ದ ರೈತ ಇದೀಗ ಅತೀವೃಷ್ಟಿಯಿಂದ ನೊಂದು ಹೋಗಿದ್ದಾನೆ.

ಹಾಸನದಲ್ಲೂ ಭಾರೀ ಮಳೆ: ಹಾಸನ ಜಿಲ್ಲೆಯಲ್ಲೂ ಮಳೆರಾಯನ ಅಬ್ಬರ ಮುಂದುವರೆದಿದೆ. ಅರಕಲಗೂಡು ಸೇರಿದಂತೆ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆರೆ ಕಟ್ಟೆಗಳು ಭರ್ತಿಯಾಗಿವೆ. ನದಿಗಳು ತುಂಬಿ ಹರಿಯುತ್ತಿವೆ. ಎರಡು ತಿಂಗಳ ಹಿಂದಷ್ಟೇ ಪ್ರವಾಹದಿಂದ ತತ್ತರಿಸಿದ್ದ ನದಿ ಪಾತ್ರದ ಜನ, ಮತ್ತೆ ಕಂಗಾಲಾಗಿದ್ದಾರೆ.

Translate »