ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ

October 23, 2019

ಮೈಸೂರು, ಅ.22(ಎಂಕೆ)- ಮೈಸೂರಿನಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಭೂ ಕುಸಿತ ಉಂಟಾಗಿದೆ.

ಬೆಟ್ಟದಲ್ಲಿನ ವ್ಯೂ ಪಾಯಿಂಟ್ ಸಮೀಪ ನಂದಿ ಕಡೆಗೆ ಸಾಗುವ ಮಾರ್ಗದಲ್ಲಿ ರಸ್ತೆ ತಡೆಗೋಡೆಯೊಂದಿಗೆ ಭೂಮಿ ಕುಸಿದು ಬಿದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮಳೆ ಮುಂದುವರೆದಿರುವ ಕಾರಣ ಮತ್ತಷ್ಟು ಭೂ ಕುಸಿತವಾಗುವ ಭೀತಿ ಎದುರಾಗಿದೆ. ದಸರಾ ಸಂದರ್ಭದಲ್ಲಿ ದೀಪಾಲಂಕಾರದಲ್ಲಿ `ಸುಸ್ವಾಗತ’ ಹಾಗೂ `ವೆಲ್‍ಕಮ್’ ಅಕ್ಷರ ವಿನ್ಯಾಸ ಮಾಡಿರುವ ಸ್ಥಳಕ್ಕೆ ಕೇವಲ 100 ಮೀ. ಸಮೀಪ ಈ ಭೂ ಕುಸಿತವಾಗಿದೆ.

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತವಾಗಿರುವುದು ಇದೇ ಮೊದಲು. ಇದುವರೆಗೆ ಎಷ್ಟೇ ಜೋರು ಮಳೆ ಸುರಿದರೂ ಎಲ್ಲಿಯೂ ಈ ಪ್ರಮಾಣದಲ್ಲಿ ಮಣ್ಣು ಕುಸಿದಿರಲಿಲ್ಲ. ನಿನ್ನೆ ರಾತ್ರಿ ಇದೇ ಮಾರ್ಗದಲ್ಲಿ ಮನೆಗೆ ಹೋಗಿದ್ದೆ. ಇಂದು ಬೆಳಿಗ್ಗೆ ಬರುವಾಗ ರಸ್ತೆಬದಿ ಕುಸಿದಿರುವುದು ಕಣ್ಣಿಗೆ ಬಿತ್ತು ಎಂದು ಬೆಟ್ಟದ ವ್ಯಾಪಾರಿಯೊಬ್ಬರು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಿ ಈ ಮಾರ್ಗದ ವಾಹನ ಸಂಚಾರ ನಿರ್ಬಂಧಿ ಸಲಾಗಿದೆ. ದುರಸ್ತಿ ಆಗುವವರೆಗೂ ಸಂಚಾರಕ್ಕೆ ಅವಕಾಶ ವಿರುವುದಿಲ್ಲ ಎಂದು ಚಾಮುಂಡಿಬೆಟ್ಟದಲ್ಲಿರುವ ಕೆ.ಆರ್.ಉಪ ಠಾಣೆ ಪೊಲೀಸರು ತಿಳಿಸಿದ್ದಾರೆ.

ತ್ವರಿತವಾಗಿ ಸರಿಪಡಿಸಿ:ಪ್ರತಿನಿತ್ಯ ಚಾಮುಂಡಿಬೆಟ್ಟಕ್ಕೆ ಆಗಮಿ ಸುವ ಸಾವಿರಾರು ಭಕ್ತರು ನಂದಿ ವಿಗ್ರಹ ವೀಕ್ಷಣೆಗೂ ಬರುತ್ತಾರೆ. ರಸ್ತೆ ಕುಸಿದಿರುವುದರಿಂದ ನಂದಿ ವಿಗ್ರಹದ ಕಡೆಗಿನ ಮಾರ್ಗ ದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಅಲ್ಲದೆ ಭಕ್ತರಿಗೂ ನಿರಾಸೆಯಾಗುತ್ತದೆ. ಹಾಗಾಗಿ ರಸ್ತೆಯನ್ನು ಕೂಡಲೇ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »