ತಮಿಳುನಾಡು ಸಲಗನ ಪುಂಡಾಟ
ಮೈಸೂರು

ತಮಿಳುನಾಡು ಸಲಗನ ಪುಂಡಾಟ

October 23, 2019

ಗುಂಡ್ಲುಪೇಟೆ, ಅ.22(ಸೋಮ್.ಜಿ)- ನರಹಂತಕ ಹುಲಿಯ ಸೆರೆಯಾದ ಬಳಿಕ ನಿಟ್ಟುಸಿರು ಬಿಟ್ಟಿದ್ದ ಬಂಡೀಪುರ ಕಾಡಂಚಿನ ಜನರಲ್ಲಿ ಈಗ ಕಾಡಾನೆ ಭೀತಿ ಎದುರಾಗಿದೆ.

ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಡುವ ಶಿವ ಪುರ ಮತ್ತು ಹಂಗಳ ಗ್ರಾಮದ ಸುತ್ತಮುತ್ತ ಪುಂಡಾನೆ ದಾಳಿಗೆ ಮೂರು ಹಸುಗಳು ಬಲಿಯಾಗಿದ್ದು, ಇಬ್ಬರು ವ್ಯಕ್ತಿಗಳು ತೀವ್ರ ವಾಗಿ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಲಿ ದಾಳಿಗೆ ಇಬ್ಬರು ರೈತರು ಬಲಿ ಯಾಗಿದ್ದನ್ನು ಮರೆಯುವ ಮುನ್ನವೇ ಮಂಗಳ ವಾರ ಬೆಳಗಿನಿಂದ ಸಂಜೆಯವರೆಗೆ ಅರಣ್ಯ ದಂಚಿನ ಗ್ರಾಮಸ್ಥರ ಕಾಡಿದ ಪುಂಡಾ ನೆಯ ಆರ್ಭಟ ಜನರ ನಿದ್ದೆಗೆಡಿಸಿದೆ.

ಘಟನೆ ವಿವರ: ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಹುಲಿ ಹಾವಳಿ ನಿಯಂತ್ರಣಕ್ಕೆ ಬಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ ತಮಿಳುನಾಡಿನ ಅರಣ್ಯ ಇಲಾಖೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆಯೊಂದರ ದಾಳಿ ಯಿಂದ ತಾಲೂಕಿನ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದರೆ, ಮೂರು ಹಸುಗಳು ಬಲಿಯಾಗಿವೆ. ಕೆಲವು ದಿನಗಳಿಂದ ಮಧುಮಲೈ ಹಾಗೂ ಕೆಕ್ಕನಹಳ್ಳ ಸಮೀಪ ಕಾಣಿಸಿಕೊಂಡಿದ್ದ ಈ ಪುಂಡಾನೆ ಸೋಮವಾರ ರಾತ್ರಿ ಹುಂಡೀಪುರ, ಶಿವಪುರ ಮಾರ್ಗವಾಗಿ ಸ್ಕಂದಗಿರಿ ಪಾರ್ವತಾಂಬ ಬೆಟ್ಟದತ್ತ ಆಗಮಿಸಿದೆ. ಬೆಳಿಗ್ಗೆ ಹಿಂದಿರುಗುವ ಮಾರ್ಗದಲ್ಲಿ ಕೋಡಹಳ್ಳಿ ಸಮೀಪದ ರವಿ ಎಂಬುವರ ಜಮೀನಿನಲ್ಲಿ ಅದನ್ನು ಓಡಿಸಲು ಮುಂದಾದಾಗ ಕಾಲಿಂದ ತುಳಿದು ಬಿಸಾಡಿದ ವಿಡಿಯೋ ವೈರಲ್ ಆಗಿದೆ. ನಂತರ ಸಮೀಪದ ಕಲ್ಲುಕಟ್ಟೆ ಕೆರೆಯಂಗಳದಲ್ಲಿ ನಿಂತ ಆನೆಯನ್ನು ನೋಡಿದ ಸಾರ್ವಜನಿಕರು ಅದರ ಕೊರಳಲ್ಲಿನ ಪಟ್ಟಿಯನ್ನು ನೋಡಿ ಸಾಕಾನೆ ಎಂದು ಭಾವಿಸಿ ಹತ್ತಿರ ಹೋಗಿದ್ದಾರೆ. ಜನರ ಗದ್ದಲದಿಂದ ರೊಚ್ಚಿಗೆದ್ದ ಆನೆ ಸಮೀಪದಲ್ಲಿದ್ದ ಹಸುವಿಗೆ ದಂತದಿಂದ ತಿವಿದು ಕೊಂದಿದೆ. ತದನಂತರ ಶಿವಪುರ ಗ್ರಾಮದ ಸಿದ್ದಯ್ಯ(60) ಎಂಬುವರು ತಮ್ಮ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದಾಗ ಏಕಾಏಕಿ ದಾಳಿ ನಡೆಸಿ ಅವರನ್ನು ಎತ್ತಿ ಬಿಸಾಡಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದ ಪ್ರಥಮ ಚಿಕಿತ್ಸೆ ನೀಡಿ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ನಂತರ ಹಳ್ಳದ ಮಾರ್ಗವಾಗಿ ಸಾಗಿದ ಆನೆಯು ಹಂಗಳಪುರ ಸಮೀಪ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಹಂಗಳ ಗ್ರಾಮದ ಕೆರೆಯತ್ತ ಧಾವಿಸಿ ನೀರಿಗಿಳಿದಾಗ ಆನೆಯನ್ನು ನೋಡಲು ಮುಗಿಬಿದ್ದ ಜನರತ್ತ ನುಗ್ಗಿದೆ. ಈ ಸಂದರ್ಭದಲ್ಲಿ ತಾಲೂಕಿನ ಆಲತ್ತೂರು ಗ್ರಾಮದ ಸ್ವಾಮಿ(30) ಎಂಬುವರನ್ನು ಎತ್ತಿ ಬಿಸಾಡಿದ್ದು, ತೀವ್ರ ಗಾಯಗೊಳಿಸಿದೆ. ತೀವ್ರವಾಗಿ ಗಾಯಗೊಂಡ ಸ್ವಾಮಿಯನ್ನೂ ಮೈಸೂರಿಗೆ ಕರೆದೊಯ್ಯಲಾಗಿದೆ. ರಸ್ತೆಯನ್ನು ದಾಟುವ ಸಂದರ್ಭದಲ್ಲಿ ಎದುರಾದ ಹಸುವಿಗೂ ಕೊಂಬಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ ಪರಿಣಾಮ ಹಸುವು ಸಾವಿಗೀಡಾಯಿತು. ಒಟ್ಟಾರೆ ಪುಂಡಾನೆಯ ರಂಪಾಟಕ್ಕೆ ಮೂರು ಹಸುಗಳು ಬಲಿಯಾಗಿದ್ದು, ಇಬ್ಬರು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ. ಕಳೆದ ತಿಂಗಳು ತಮಿಳುನಾಡಿನ ಹೊಸೂರಿನಲ್ಲಿ ಒಬ್ಬನನ್ನು ಕೊಂದಿದ್ದ ಈ ಆನೆಯನ್ನು ತಮಿಳುನಾಡು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟಿತ್ತು. ಆದರೆ ರೇಡಿಯೋ ಕಾಲರ್‍ನ ಬ್ಯಾಟರಿ ಸಾಮಥ್ರ್ಯ ಮುಗಿದಿದ್ದರಿಂದ ಮಾನಿಟರಿಂಗ್ ತಂಡಕ್ಕೆ ಆನೆಯ ಚಲನವಲನ ಪತ್ತೆಯಾಗಲಿಲ್ಲ. ಈಗ ಅದು ಬಂಡೀಪುರ ಮಾರ್ಗವಾಗಿ ಶಿವಪುರಕ್ಕೆ ಬಂದಿದೆ.

ಸಿದ್ದತೆ: ಅರಣ್ಯ ಇಲಾಖೆಯು ಪುಂಡಾನೆ ಸೆರೆಗೆ ನಿರ್ಧರಿಸಿ ಪಶುವೈದ್ಯ ಡಾ.ನಾಗರಾಜು ಹಾಗೂ ತಂಡವನ್ನು ಕರೆಸಿಕೊಂಡಿತು. ಅರಿವಳಿಕೆ ನೀಡಿ ಸೆರೆ ಹಿಡಿಯಲು ನಾಗರ ಹೊಳೆಯಿಂದ ಸಾಕಾನೆಗಳನ್ನು ಕರೆಸಲಾಗುತ್ತಿದೆ ಮಂಗಳವಾರವೇ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಎಸಿಎಫ್ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.

Translate »