ಹಲವು ವರ್ಷವಾದರೂ ಸಾವಿರಕ್ಕೂ ಹೆಚ್ಚು ಹಂಚಿಕೆಯೇ ಆಗಿಲ್ಲ
ಮೈಸೂರು

ಹಲವು ವರ್ಷವಾದರೂ ಸಾವಿರಕ್ಕೂ ಹೆಚ್ಚು ಹಂಚಿಕೆಯೇ ಆಗಿಲ್ಲ

October 23, 2019

ಮೈಸೂರು, ಅ.22(ಪಿಎಂ)-ಕೊಳೆಗೇರಿ ನಿವಾಸಿ ಗಳಿಗಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿ ನಿರ್ಮಾಣ ಗೊಂಡಿರುವ ಮನೆಗಳ ಪೈಕಿ ಸಾವಿರಕ್ಕೂ ಹೆಚ್ಚು ಮನೆಗಳು ಹಂಚಿಕೆ ಭಾಗ್ಯವನ್ನೇ ಕಂಡಿಲ್ಲ. ಈ ಪೈಕಿ ಹಲವು ಮನೆಗಳ ಕಿಟಕಿ-ಬಾಗಿಲು ಮುರಿದು ಬೀಳುವ ಹಂತಕ್ಕೂ ಬಂದಿವೆ. ಜೊತೆಗೆ ಅವುಗಳ ಕಳ್ಳತನವೂ ನಡೆಯುತ್ತಿದೆ.

ಮೈಸೂರಿನ ಜಿಪಂ ಸಭಾಂಗಣದಲ್ಲಿ ಮಂಗಳ ವಾರ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾರ್ಯ ಪಾಲಕ ಅಭಿಯಂತರ ಕಪನಿಗೌಡ, ಮಂಡಳಿ ಪ್ರಗತಿ ಅಂಕಿ-ಅಂಶ ನೀಡುವ ವೇಳೆ ಈ ಮಾಹಿತಿ ನೀಡಿದರು.

ಏಕಲವ್ಯನಗರದಲ್ಲಿ ಕಳೆದ 4 ವರ್ಷಗಳ ಹಿಂದೆ 1040 ಮನೆಗಳು ನಿರ್ಮಾಣವಾದವು. ಈ ಪೈಕಿ 638 ಹಂಚಿಕೆಯಾಗಿವೆ. ಅದೇ ರೀತಿ ಕೆಸರೆಯಲ್ಲಿ 3 ವರ್ಷಗಳ ಹಿಂದೆ 252 ಮನೆಗಳನ್ನು ನಿರ್ಮಿಸ ಲಾಗಿದ್ದು, ಎಲ್ಲವೂ ಖಾಲಿ ಉಳಿದಿವೆ. ಜೊತೆಗೆ ರಾಜೀವ್ ನಗರದಲ್ಲಿ 552 ಮನೆಗಳು ನಿರ್ಮಾಣಗೊಂಡಿದ್ದು, ಆಕ್ಷೇಪಣೆ ಹಾಗೂ ಕೆಲ ಗೊಂದಲಗಳ ಹಿನ್ನೆಲೆಯಲ್ಲಿ ಈ ಹಂಚಿಕೆ ಸಾಧ್ಯವಾಗುತ್ತಿಲ್ಲ. ಆದರೆ ರಾಜೀವ್ ನಗರದ 143 ಮನೆಗಳಿಗೆ ಅಕ್ರಮವಾಗಿ ಜನ ಸೇರಿಕೊಂಡಿ ದ್ದಾರೆ. ಇಂತಹ ಖಾಲಿ ಇರುವ ಮನೆಗಳ ಹಲವು ಮನೆಗಳ ಕಿಟಕಿ-ಬಾಗಿಲು ಮುರಿದಿವೆ. ಮತ್ತೊಂದೆಡೆ ಇವುಗಳ ಕಳ್ಳತನವೂ ಆಗಿದೆ ಎಂದು ವಿವರಿಸಿದರು.

ಪ್ರೋತ್ಸಾಹ ಧನದ ವರದಿ ನೀಡಿ: ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕಾರಿ, ಪ್ರಗತಿ ಸಂಬಂಧ ಮಾಹಿತಿ ನೀಡಿದರು. ಆದರೆ ಈ ವೇಳೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್, ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಶೇ.100 ರಷ್ಟು ಸಾಧನೆ ಆಗಿದೆಯೇ ಎಂದು ಪ್ರಶ್ನಿಸಿದರು. ಪ್ರಸಕ್ತ ಸಾಲಿನಲ್ಲಿ 192 ಕೋಟಿ ರೂ. ಪ್ರೋತ್ಸಾಹ ಧನ ಮಂಜೂರಾಗಿದೆ. ಆದರೆ 87 ಸಾವಿರ ಹಾಲು ಉತ್ಪಾದಕರ ಪೈಕಿ 8 ಸಾವಿರ ಮಂದಿಗೆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗು ವಲ್ಲಿ ಉಂಟಾದ ದೋಷದಿಂದ ಪ್ರೋತ್ಸಾಹಧನ ತಲುಪಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಸಾ.ರಾ.ನಂದೀಶ್, ಮುಂದಿನ ಸಭೆಯಲ್ಲಿ ಪ್ರೋತ್ಸಾಹ ಧನಕ್ಕೆ ಸಂಬಂಧಿಸಿದಂತೆ ಎಲ್ಲಾ ಅಂಕಿ-ಅಂಶಗಳ ವರದಿ ನೀಡುವಂತೆ ಸೂಚನೆ ನೀಡಿದರು.

ವೈದ್ಯರಿಲ್ಲದ ಮಿರ್ಲೆ ಆರೋಗ್ಯ ಕೇಂದ್ರ: ಮಿರ್ಲೆ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ, ರೋಗಿಗಳು ಸಾಲಿಗ್ರಾಮಕ್ಕೆ ಬರುವಂತಾಗಿದೆ. ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿ ಇರುವ ಕೇಂದ್ರಗಳಿಂದ ಕೊರತೆ ಇರುವ ಕಡೆಗೆ ನಿಯೋಜಿಸಿ ಎಂದು ಸಾ.ರಾ. ನಂದೀಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕ ಟೇಶ್ ಅವರಿಗೆ ಸೂಚನೆ ನೀಡಿದರು. ಸಾಲಿಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ 8 ಮಂದಿ ಸಿಬ್ಬಂದಿ ಇದ್ದಾರೆ. ಇಲ್ಲಿ ಪ್ರತಿನಿತ್ಯ ಹೆಚ್ಚಿನ ಒತ್ತಡ ಇರುತ್ತದೆ. ಆದರೆ ಜಯಪುರದ ಕೇಂದ್ರದಲ್ಲಿ ವೈದ್ಯರು ಸೇರಿದಂತೆ 15 ಮಂದಿ ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ಇರುವ ಕಡೆಗಳಿಂದ ಕೊರತೆ ಇರುವ ಜಾಗಕ್ಕೆ ನಿಯೋಜಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ ಸಾ.ರಾ.ನಂದೀಶ್, ಬಂದು 6 ತಿಂಗಳಾಗಿದೆ ಎನ್ನುತ್ತೀರಿ. ಆದರೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳುತೀರಿ. ಇದು ಸರಿಯಲ್ಲ ಎಂದು ಡಿಹೆಚ್‍ಓ ಡಾ.ವೆಂಕಟೇಶ್ ವಿರುದ್ಧ ಕಿಡಿಕಾರಿದರು.

ಈ ವೇಳೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಹೆಚ್.ಡಿ.ಕೋಟೆ ತಾಲೂಕು ಆಸ್ಪತ್ರೆ ಉದ್ಘಾಟನೆ ಯಾವಾಗ ಮಾಡುತೀರಿ? ಏನೇನು ಕೆಲಸ ಬಾಕಿ ಇದೆ. ಈಗಾಗಲೇ ಜನರು ಪ್ರಶ್ನೆ ಮಾಡುತ್ತಿದ್ದಾರೆ ಕೇಳಿದರು. ಇದಕ್ಕೆ ಉತ್ತರಿಸಿದ ಡಿಎಚ್‍ಓ, ಗುತ್ತಿಗೆದಾರರಿಂದ ನಮಗೆ ಇನ್ನು ಹಸ್ತಾಂತರವಾಗಿಲ್ಲ. ಒಂದು ತಿಂಗಳೊಳಗೆ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Translate »